Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೯೧೩, ಕವಯತ್ರಿ: ವಿಜಯಶ್ರೀ ಹಾಲಾಡಿ, ಕವನದ ಶೀರ್ಷಿಕೆ: ಅವಳೆಂದರೆ ನೀವೇ.... - Karnataka Kahale

ಅನುದಿನ ಕವನ-೧೯೧೩, ಕವಯತ್ರಿ: ವಿಜಯಶ್ರೀ ಹಾಲಾಡಿ, ಕವನದ ಶೀರ್ಷಿಕೆ: ಅವಳೆಂದರೆ ನೀವೇ….

ಹಿರಿಯ ಕವಯತ್ರಿ ಎಂ. ಆರ್ ಕಮಲ ಅವರು ಇಂದು (ಮಾ.27)ತಮ್ಮ ಹುಟ್ಟುಹಬ್ದ ಸಂಭ್ರಮದಲ್ಲಿದ್ದಾರೆ. ಐದು ವರ್ಷಗಳ  ಹಿಂದೆ  ಅವಳೆಂದರೆ ನೀವೇ…. ಕವಿತೆ ಮೂಲಕ ಕವಯತ್ರಿ  ವಿಜಯಶ್ರೀ ಹಾಲಾಡಿ ಅವರು ಶುಭಾಶಯ ಕೋರಿದ್ದರು. ಐದು ವರ್ಷಗಳ ಹಿಂದೆ ಬರೆದದ್ದಾದರೂ ಇಂದಿಗೂ ಎಂದಿಗೂ ಕವಿತೆ ಪ್ರಸ್ತುತ.
ಕರ್ನಾಟಕ ಕಹಳೆ ಡಾಟ್ ಕಾಮ್  ಈ‌ಕವಿತೆಯನ್ನು ಪ್ರಕಟಿಸುವ ಮೂಲಕ ಹಿರಿಯ ಕವಯತ್ರಿ ಎಂ ಆರ್ ಕಮಲ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸುತ್ತಿದೆ.     (ಸಂಪಾದಕ)❤️🌹🙏🏽🌿

ಅವಳೆಂದರೆ ನೀವೇ

ನನ್ನ ಕಾವ್ಯದಲ್ಲಿ
ಒಬ್ಬಳು ‘ಅವಳಿ’ದ್ದಾಳೆ
ಬಹುತೇಕ ನೀವೇ
ನಾನೂ ಹೌದು!

ಭಾವುಕ ಕಂಗಳಲ್ಲಿ -ಅಷ್ಟಗಲ
ಜಗ ತುಂಬಿಕೊಂಡವಳು
ಮಿಂಚುಹುಳದ ಕಂದೀಲು
ಹಿಡಿದವಳು ..
ನೀಹಾರಿಕೆಗಳ ಮಾತಾಡಿಸುವವಳು
ಮೌನಕ್ಕೆ ಭಾಷ್ಯವಾದವಳು

ಚೆಲುವೆ ಎಂದರೆ ಸಾಕಾಗುವುದಿಲ್ಲ
ಕಮಲಕ್ಕೆ ಬಣ್ಣಕೊಟ್ಟವಳು
ನೀಲಿರಾಗ ನೇರಳೆಗಳ ಹೀರಿ
ಕಡು ಮುಗ್ಧೆಯಾದವಳು
ಮಣ್ಣಗಂಧಕ್ಕೆ ಸೋತವಳು

ನಾನಂತೂ ಹೊರಟಿರುವೆ ನಿಮ್ಮ ಜೊತೆ
ಚಕೋರ ಪಕ್ಷಿಗಳ ಕಾಣಲಿಕ್ಕೆ
ಬೆಕ್ಕು ನಾಯಿ ಮೊಲ ಹುಲಿ
ಹುಲ್ಲೆಗಳ ಮೈದಡವಲಿಕ್ಕೆ..
ಜೀವವೆಂದರೆ ಪ್ರೀತಿ ಎಂದರೆ
ಅದೇ ನಿಮ್ಮ ದನಿ – ಕಾಲ್ಗೆಜ್ಜೆ

ನನಗೀಗ
ಕಮಲವೆಂದಾಗ
ಆ ದಂಟು ಎಲೆಗಳು ಕೊಳ
ಜೀವಜಲ ಉರಿವ ಸೂರ್ಯ
ಯಾರೂ ಯಾವುದೂ ನೆನಪಾಗುವುದಿಲ್ಲ
ಅರೇ
ಕಮಲವೆಂದರೆ ನೀವು ತಾನೇ
ಮಾ! !


-ವಿಜಯಶ್ರೀ ಹಾಲಾಡಿ