“ಅವಳೆಂದರೆ ಪ್ರತಿ ಎದೆಯಂಗಳದ ಹೊಂಬೆಳಕಿನ ಬೆಳದಿಂಗಳ ಬಾಲೆ. ಜೀವ-ಭಾವದಂಗಳ ಬೆಳಗುವ ಕೋಟಿ ಕೋಲ್ಮಿಂಚಿನ ಪ್ರೇಮಜ್ವಾಲೆ. ನರ-ನರಗಳ ಸ್ವರತಂತಿ ಮೀಟುತ, ಧಮನಿ ಧಮನಿಗಳಲಿ ಒಲವ ಧುಮ್ಮಿಕ್ಕಿಸುವ ಸ್ವಪ್ನಮಾಲೆ. ಇಲ್ಲಿ ನೀವು ಓದಿ ಆಸ್ವಾಧಿಸಿದಷ್ಟೂ ನಿಮ್ಮ ಕನಸಿನಂಗಳದ ಕಾವ್ಯಕನ್ನಿಕೆಯ ಝೇಂಕಾರ. ಇಲ್ಲಿ ನೀವು ಅನುಭಾವಿಸಿದಷ್ಟೂ ನಿಮ್ಮ ನೆನಪಿನಂಬರದ ಪೂರ್ಣಚಂದ್ರಿಕೆಯ ಸಾಕರ. ನಿಮ್ಮ ನಿಮ್ಮ ಭಾವಕ್ಕೆ.. ನಿಮ್ಮ ನಿಮ್ಮ ಅನುಭೂತಿಗೆ ಈ ಕವಿತೆ.. ಏನಂತೀರಾ..?”. -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಅವಳೆಂದರೆ….
ದಿವ್ಯ ಚೆಲುವಿನ ಸಿರಿ
ನಿತ್ಯ ಒಲವಿನ ಝರಿ
ಭವ್ಯ ಪ್ರೇಮದ ಗಿರಿ.!
ಅವಳೆಂದರೆ….
ರಮ್ಯ ಮೋಹಕ ತಾರೆ
ನವ್ಯ ಚುಂಬಕ ಧಾರೆ
ಸತ್ಯ ಪ್ರೀತಿಯ ನೀರೆ.!
ಅವಳೆಂದರೆ…
ಬಳಲದ ಮಾಧುರ್ಯ
ಬಾಡದ ಸೌಂದರ್ಯ
ಬತ್ತದ ಔದಾರ್ಯ.!
ಏನೇ ಬದಲಾದರೂ..
ಕಾಲ-ಲೋಕ ಸ್ಥಿತಿ-ಗತಿ
ಅವಳು ಅಂದಿಗೂ…
ಇಂದಿಗೂ ಅದೇ ರೀತಿ.!
ಮಧುಮಧುರ ಸುಂದರ
ಅನುರಾಗ ಸ್ವರಶಿಲ್ಪ.!
ಸವಿ ಅಕ್ಕರೆ ಸಕ್ಕರೆಯ
ಚೈತನ್ಯದ ಸ್ವರೂಪ.!
ಮಾಸದ ಮಸುಕಾಗದ
ಪ್ರೀತಿಯ ಸುರರೂಪ.!
ಆರದೆ ಅಳಿಯದೆ ಸದಾ
ಬೆಳಗುವ ಚಿರದೀಪ.!
ಅವಳೆಂದರೆ……
ಪ್ರತಿಮೆ ಉಪಮೆಗೆ ಸಿಗದ
ಜೀವ-ಜೀವದ ಒಲುಮೆ.!
ಭಾವ-ಭಾವದ ಚಿಲುಮೆ.!
ಅವಳೆಂದರೆ…..
ಉಪಮಾನಗಳಿಗೆ ನಿಲುಕದ
ರಾಗರಂಜಿತ ನಲುಮೆ
ವರ್ಣರಂಜಿತ ನಿಲುಮೆ.!
ಅವಳೆಂದರೆ..
ಚಂದಸ್ಸು ಪ್ರಾಸಕೆ ಎಟುಕದ
ವರ್ಣನಾತೀತ ಅನನ್ಯಭಾಷ್ಯ
ಪದಾತೀತ ಅಪೂರ್ವಕಾವ್ಯ.!
ನಿಜಕೂ ಅವಳೆಂದರೆ……
ಅವಳು ಅವಳಷ್ಟೆ..!!
ಎಂದೆಂದಿಗೂ ಅವಳಷ್ಟೆ.!!!

-ಎ.ಎನ್.ರಮೇಶ್. ಗುಬ್ಬಿ.
