ಅನುದಿನ ಕವನ-೧೬೦೮, ಕವಯಿತ್ರಿ: ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ, ಕವನದ ಶೀರ್ಷಿಕೆ: ಆ ಎಲೆ

ಆ ಎಲೆ

ಉದುರಿತು…
ಗಾಳಿಗೋ
ತೊಟ್ಟು ತೊಟ್ಟ ಗಾಯಕೋ
ಬಿಡುಗಡೆಯ ಆಸೆಗೋ
ಇರುವೆಯನು ದಡ ಸೇರಿಸುವ
ಹಕ್ಕಿಯ ಹಂಬಲಕೋ
ಎಲೆಯೊಂದು ಉದುರಿತು…

ಕಣ್ಣಮಾತು ಕೇಳಿಸದಷ್ಟು ಕಿವುಡು
ಈ ಹುಡುಕಾಟದ ಹೆಜ್ಜೆಗಳಿಗೆ
ಕ್ಷಣ ನಿಂತು ಗಮನಿಸದ ಜರೂರತ್ತೂ!
ಏನಾಗಿರಬಹುದು ಎಲೆ?
ಗಾಳಿಯ ಕೈ ಹಿಡಿದು
ಬಾನೆತ್ತರ, ಬಯಲ ಬಿತ್ತರ
ತಡೆಯೊಡೆದು ತರಗೆಲೆಗಳ
ಗುಂಪು ಸೇರಿಕೊಂಡಿತೋ?
ದಡಕೆ ಈಜಿ,
ಇರುವೆಯ ಪ್ರೇಮದಲಿ
ತಣ್ಣಗೆ ಬಿದ್ದುಕೊಂಡಿತೋ?
ಹಾಲು ಬಣ್ಣದ ನೆತ್ತರ ನೆಕ್ಕಿ
ಕುಡಿದು, ಮೂಸಿ
ಗಾಯಗಳ ಸವರಿಕೊಂಡಿತೋ?
ಕುಕ್ಕಿ ಕೆಡವಿದ ಹಕ್ಕಿ ಕೊಕ್ಕಿನ
ಬೇನೆಯನು ನೀರಿನುಂಗುರದಲಿ
ಅದ್ದಿಕೊಂಡಿತೋ?

ಕೊಳೆವ, ಅಲೆವ,
ಅಲೆಯಾಗುವ
ಲಯವಾಗುವ
ಅನಂತವಾಗುವ
ಏನದು ಆ ಲೀಲೆ?

-ರಮ್ಯ ಕೆ ಜಿ ಮೂರ್ನಾಡು, ಮಡಿಕೇರಿ

Leave a Reply

Your email address will not be published. Required fields are marked *