ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಲು ಮಾಜಿ ಸಚಿವ ಎಚ್. ಆಂಜನೇಯ ಆಗ್ರಹ

ಬಳ್ಳಾರಿ ಮೇ 25 : ಬೇಡ ಜಂಗಮ ಜಾತಿ ಮಾದಿಗ ಜನಾಂಗದವರಿಂದ ಕಾಡಿಬೇಡಿ ಮಾಂಸ ಮತ್ತು ಮದ್ಯವನ್ನು ಪಡೆದುಕೊಂಡು ಉಣ್ಣುತ್ತಿದ್ದರು. ಈ ಜಾತಿ ಹಲವಾರು ವರ್ಷಗಳ ಹಿಂದೆ ನಶಿಸಿಹೋಗಿದೆ ಬೇಡ ಜಂಗಮ ಜಾತಿಯನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕು ಎಂದು ಮಾಜಿ ಸಚಿವ ಎಚ್ ಆಂಜನೇಯ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಅವರು ಭಾನುವಾರ ನಗರದ ರಾಯಲ್ ಪೋರ್ಟ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮನೆ ಬಾಗಿಲಿಗೆ ಬರುವ ಜಾತಿ ಗಣತಿದಾರರಿಗೆ ಆದಿ ಕರ್ನಾಟಕ ಆದಿ ಜಾಂಬವ ಎಂದು ಬರೆಸದೆ ಪರಿಶಿಷ್ಟ ಜಾತಿ ಮಾದಿಗ ಎಂದು ಬರೆಸಲು ಅವರು ಮಾದಿಗ ಜನಾಂಗಕ್ಕೆ ಕರೆ ನೀಡಿದರು.
ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದರೂ ಈಗಾಗಲೇ ಸುಮಾರು 80ರಷ್ಟು ಜಾತಿ ಅಳಿದು ಹೋಗಿವೆ, ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿವೆ ಎಂದು ಬ್ರಿಟಿಷ್ ಕಾಲದ ಮಿಲ್ಲರ್ ನಡೆಸಿದ್ದ ಜಾತಿ ಜನಗಣತಿಯನ್ನು ಈಗಲೂ ಹಾಗೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮಿಲ್ಲರ್ ಆಡಳಿತದ ಸಂದರ್ಭದಲ್ಲಿದ್ದ ಬೇಡ ಜಂಗಮ, ಹಲಾಲ್ ಕೋರ, ಚಾಂಡಾಳ ಜಾತಿಗಳು ಸೇರಿದಂತೆ ಅನೇಕ ಜಾತಿಗಳು ಈಗಾಗಲೇ ನಶಿಸಿಹೋಗಿವೆ. ನಶಿಸಿ ಹೋದ ಜಾತಿಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಮುಂದುವರೆದು ಮಾತನಾಡಿದ ಆಂಜನೇಯ ಅವರು ಈಗಾಗಲೇ ನಶಿಸಿ ಹೋದ ಬೇಡ ಜಂಗಮ ಜಾತಿಯೆಂದು ವೀರಶೈವ ಜನಾಂಗ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಳ್ಳುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ, ಇವರು ವೀರಶೈವ ಜನಾಂಗಕ್ಕೆ ಸೇರಿದ್ದು ಪುರೋಹಿತ ವೃತ್ತಿಯನ್ನು ಮಾಡುತ್ತಿದ್ದಾರೆ ಮತ್ತು ಮೇಲ್ವರ್ಗದ ಜಾತಿಗೆ ಸೇರಿದವರಾಗಿದ್ದಾರೆ ಆದರೂ ಸಹ ಇವರು ಪರಿಶಿಷ್ಟ ಜಾತಿ ಎಂದು ಜಾತಿ ಪ್ರಮಾಣ ಪತ್ರ ಪಡೆದು ನಮ್ಮ ಅನ್ನವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ದೂರಿದರು. ಬೇಡ ಜಂಗಮ ಎಂದು ಸುಳ್ಳು ಹೇಳಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡವರಿಗೆ ಮತ್ತು ಮಂಜೂರು ಮಾಡಿದ ಅಧಿಕಾರಿಗಳಿಗೆ
ಜೈಲು ಶಿಕ್ಷೆ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಜನಸಂಖ್ಯೆಗೆ ಅನುಗುಣವಾಗಿ ಮಾದಿಗರಿಗೆ ಒಳ ಮೀಸಲಾತಿಯನ್ನು ನೀಡಬೇಕು ಆಂಧ್ರ ಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರ ಹೋರಾಟಕ್ಕೆ ಮಣಿದು ಅಲ್ಲಿನ ಸರ್ಕಾರ ಒಳಮಿಸಲಾತಿಯನ್ನು ಜಾರಿಗೊಳಿಸಿರುತ್ತದೆ. ಅದೇ ಪ್ರಕಾರ ರಾಜ್ಯದಲ್ಲಿಯೂ ಸಹ ನಾಗಮೋಹನ್ ದಾಸ್ ಅವರ ವರದಿಯ ಅನುಗುಣವಾಗಿ ಜೂನ್ ಒಳಗಡೆ ಒಳ ಮೀಸಲಾತಿಯನ್ನು ಜಾರಿಗೊಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ್, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ. ಮಾನಯ್ಯ, ಕೆಪಿಸಿಸಿ ಸದಸ್ಯ ಎಲ್ ಮಾರೆಣ್ಣ, ಸಂಗನಕಲ್ಲು ಎಕೆ ಗಂಗಾಧರ, ಸಿದ್ದೇಶ್, ಎರುಕುಲಸ್ವಾಮಿ, ಸಾಹಿತಿ ಎನ್. ಡಿ ವೆಂಕಮ್ಮ, ವೆಂಕಟೇಶ್ ಹೆಗಡೆ ಸೇರಿದಂತೆ ಹಲವು ಮುಖಂಡರು ಇದ್ದರು.
—–

Leave a Reply

Your email address will not be published. Required fields are marked *