ಅನುದಿನ‌ ಕವನ-೧೬೩೩, ಕವಿ:ಸಿದ್ಧರಾಮ‌‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಮಾತನಾಡದೆ ಹೋದರೇನು ಎದೆಯ ಬಡಿತಗಳು ಮಾತನಾಡಿದವಲ್ಲ
ಮನದಲಿರುವುದ ಏನೊಂದ ತಿಳಿಸದೆಯು ಕಂಗಳು ಮಾತನಾಡಿದವಲ್ಲ

ಇಬ್ಬರ ನಡುವಿನ ಮಧುರ ಮೌನ ಎದೆಗಳಲಿ ಸುಂದರವಾಗಿ ಬೆಳಗುತಿದೆ
ನಿನ್ನ ಕದಪುಗಳು ಹೇಳದಿದ್ದರೇನು ಮುಂಗುರುಗಳು ಮಾತನಾಡಿದವಲ್ಲ

ಸನಿಹವೆಂಬುದೂ ಸಾಲದಾಗಿ ಆ ಪದದ ಗಡಿಯನೆ ದಾಟಿ ಹೊರಟಿದೆ
ಭಾವಗಳು ಹೇಳಬೇಕೆಂದಿರುವುದನೆಲ್ಲ ಉಸಿರುಗಳು ಮಾತನಾಡಿದವಲ್ಲ

ಒಲವನೆ ತುಂಬಿದ ಹಣತೆಯ ತೆರದಿ ಹೊಳೆಯುತಿದೆ ನಿನ್ನ ಮೊಗವು
ನಮ್ಮಿಬ್ಬರ ಪ್ರೀತಿಯ ದಾರಿಯ ಕುರಿತು ಚಿಕ್ಕೆಗಳು ಮಾತನಾಡಿದವಲ್ಲ

ಭಯವೇಕೆ ತೆರೆದ ಬಾಗಿಲು ತೆರೆದಿರಲಿಬಿಡು ಪ್ರೇಮವನರಿಯಲಿ ಜಗವು
ಯಾರ ಯೋಚನೆ ನಮಗೇಕೆಂದು ನಮ್ಮ ಹೆಜ್ಜೆಗಳು ಮಾತನಾಡಿದವಲ್ಲ


-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *