ಅನುದಿನ ಕವನ-೧೬೩೯, ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಹೂವಿನೊಳಗಿನ ಪರಿಮಳ ಗಾಳಿಯಲ್ಲಿ ತೇಲಿ ಹೋದಂತೆ ಇಲ್ಲವಾಗಬೇಕು
ಹಣತೆಯ ದೀಪದ ಬೆಳಕು ಕತ್ತಲೆಯಲ್ಲಿ ಮಾಯವಾಗುವಂತೆ ಇಲ್ಲವಾಗಬೇಕು

ಇತ್ತು ಇಲ್ಲಗಳ ಮಧ್ಯದ ಹಂಗನು ಹರಿದು ಸುರುಳಿ ಸುತ್ತಿ ಹೊರಡಬೇಕು
ನಿದ್ದೆಯೋ ಎಚ್ಚರವೋ ಎಂಬ ಸ್ಥಿತಿ ಅರ್ಥವಾಗುವಂತೆ ಇಲ್ಲವಾಗಬೇಕು

ಬದುಕಿನಲ್ಲಿನ ಗೋಜಲು ಗೊಂದಲಗಳ ಕಗ್ಗಂಟನೇ ಬಿಡಿಸುತ್ತ ಕುಳಿತುಬಿಟ್ಟೆ
ಸೂತ್ರ ಹರಿದ ಗಾಳಿಪಟ ಮೆಲ್ಲನೆ ತೇಲಿ ಇಲ್ಲವಾಗುವಂತೆ ಇಲ್ಲವಾಗಬೇಕು

ಕನಸು ಭ್ರಮೆಗಳ ರಂಗು ರಂಗಿನ ಕೌದಿ ಚಂದವಿದೆಯೆಂದು ಹೊದೆಯುತ್ತ ಬಂದೆ
ಪ್ರತಿ ಕ್ಷಣಗಳ ಸೂಜಿ ಹೊಲೆದಿರುವುದೇನೆಂದು ಅರಿವಾಗುವಂತೆ ಇಲ್ಲವಾಗಬೇಕು

ನೋವು ದು:ಖ ಬೇಸರಗಳ ಪಾತಾಳದಲ್ಲಿ ಮುಳುಗಿದರೂ ನಗುತಲೇ ಇದ್ದ ಸಿದ್ಧ
ಬದುಕು ಮೂರು ದಿನಗಳ ಜಾತ್ರೆ ಬರಿ ಮಾತಲ್ಲ ಎಂದೆನುವಂತೆ ಇಲ್ಲವಾಗಬೇಕು

-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *