ಅನುದಿನ ಕವನ-೧೬೪೧, ಕವಯಿತ್ರಿ: ವಿ.ನಿಶಾ ಗೋಪಿನಾಥ್, ಬೆಂಗಳೂರು, ಕವನದ ಶೀರ್ಷಿಕೆ: ಸ್ಪರ್ಶದ ದೀಪ

ಸ್ಪರ್ಶದ ದೀಪ

ನೀನು ಸ್ಪರ್ಶಿಸಿದ್ದೇ
ಪದಗಳು ಉರಿದು ಹೋದವು
ಅಂಗುಲಂಗುಲವೂ ನಿಶ್ಯಬ್ದ
ಶಿಲ್ಪವೊಂದರೊಳಗೆ ಹುಗಿದು ಹೋದಂತೆ
ನಿನಗಾಗಿ ಸಾವಿರ ವರ್ಷ ಕಾದಂತೆ
ಮತ್ತೆ ನೀನೇ ಬರಬೇಕೇನೋ
ಒಂದು ಸ್ಪರ್ಶಿಸಬೇಕೇನೋ
ಈ ಜೀವ ಮತ್ತೆ ಜೀವ ತಳೆಯಲು!

ನಿನ್ನ ಸ್ಪರ್ಶ ಕೇವಲ ಸ್ಪರ್ಶವಲ್ಲ
ಅದು ಆಟ,ಪಾಠ,ಇತಿಹಾಸ,
ಪಾಪ,ಪುಣ್ಯ,ಪ್ರಾರ್ಥನೆ ಎಲ್ಲವೂ
ನಿರಾಳ ಆಕಾಶವನೇ ನನ್ನೆದುರು ತಂದು
ಕೂರಿಸುವ ಆತ್ಮಸಂಗಾತ!

ಅದು ಕೊಡುವ ಅನುಭಾವ
ಉಸಿರಿನಷ್ಟು ನಿರ್ಣಾಯಕ
ನನ್ನ ದೇಹದೊಳಗೆ ನಾನಿಲ್ಲ
ಎನ್ನುವ ಹಾಗೆ
ಅದರ ತೆವಳಿಕೆ ಇಂಚಿಂಚಾಗಿ
ಕರಗಿಸುವ ಮಿಂಚಿನಂತೆ
ಬಣ್ಣವಿಲ್ಲದ ಬೆಳಕು
ಸುತ್ತುವರಿದಂತೆ

ಇನ್ನು ಮುಂದೆ ಯಾವ ರಾತ್ರಿಯಲ್ಲೂ
ಮಾತುಗಳೇ ಇರುವುದಿಲ್ಲ
ನೀರಿನಲ್ಲಾಡುವ ಮೀನಿನಂತೆ
ಕೇಕೆ ಹಾಕಲಿವೆ ಕಂಪನಗಳು
ನನ್ನ ನಯನದಲ್ಲೋ
ತೇಲುತ್ತಿವೆ ನಿನ್ನದೇ ರೂಹುಗಳು

ಆಗಲೇ ಕತ್ತಲೆಗೆ ಕಣ್ಣು ಮೂಡಿದ್ದು
ನೀನು ನನ್ನೊಳಗೆ ಬೆಳೆಯುತ್ತಾ ಹೋದದ್ದು
ಎಲ್ಲ ಗಾಬರಿಗಳನ್ನೂ ನಾನು ಕಳಚಿಕೊಂಡದ್ದು
ಏಕೆಂದರೆ,ನನ್ನ ಹತ್ತಿರ ನಿನ್ನನ್ನು ತಡೆಯುವ ಯಾವ ಆಯುಧಗಳೂ ಉಳಿದಿರಲಿಲ್ಲ!

ಕೇಳಿದೆ ನಾನು ಕನಸಿನಲ್ಲಿಂಬಂತೆ,
“ನಿನ್ನ ದೇಹ ಎಲ್ಲಿ ಮುಗಿಯುತ್ತದೆ?”
ನಿನ್ನ ನಗು ಉಸಿರಿನ ಕಂಪನದಂತೆ ಮೊಳಗಿತು,
“ನಿನ್ನಲ್ಲಿ”

ಉಳಿದು ಹೋಯಿತು ಕಂಪನ ನನ್ನಲ್ಲಿ
ನಿನ್ನ ಕೆನ್ನೆಯ ಇಳಿಜಾರಿನಲ್ಲಿ
ಬೋರ್ಗೆರೆಯುವ ಜಲಪಾತದಂತೆ
ನಾನು ಸರಿದು ಹೋದೆ
ಕೇವಲ ಶರೀರದ ವ್ಯಾಪಾರ ವಾಗಿತ್ತೇನು ಅದು,ಅಲ್ಲ
ಅದು ನಾನಿಲ್ಲದೇ ನಾನಾಗುವ ಪರಿ
ಇಳಿಜಾರಿನಲ್ಲಿ ಹರಿದ ನನ್ನ ಆತ್ಮ
ಕತ್ತಲ ಕವಚವನ್ನು
ನಾನು ಬೇಕೆಂದೇ ಹೊದ್ದುಕೊಂಡಿದ್ದೆ
ಬಾಗಿದ ಬಿಲ್ಲಿನಂತೆ ಒಡ್ಡಿಕೊಂಡಿದ್ದೆ

ಕೊನೆಗೆ,
ನೆನಪಿನಲ್ಲಿ ಆಟದಲ್ಲಿ ಬೇಟದಲ್ಲಿ
ಪ್ರೇಮದ ಉತ್ತುಂಗದಲ್ಲಿ
ಉಳಿದದ್ದು
ನಿನ್ನ ಬೆರಳುಗಳ ಸ್ಪರ್ಶ ಒಂದೇ

-ವಿ. ನಿಶಾ ಗೋಪಿನಾಥ್, ಬೆಂಗಳೂರು
—–

Leave a Reply

Your email address will not be published. Required fields are marked *