ಸಿನಿಮಾ ಎಂಬ ಗ್ಲಾಮರ್ ಪ್ರಪಂಚ ಹಣ, ಹೆಸರು ಕೀರ್ತಿ ಎಲ್ಲವನ್ನೂ ನೀಡುತ್ತದೆ. ಆದರೇ ಮಾನವೀಯತೆಯ ಮೌಲ್ಯವನ್ನೇ ಕಸಿದುಕೊಳ್ಳುತ್ತದೆ.
ಇದರ ವಿಷಚಕ್ರಕ್ಕೆ ಸಿಲುಕದೇ, ತಮ್ಮ ವ್ಯಕ್ತಿತ್ವವನ್ನು, ಸಾಮಾಜಿಕ ಮೌಲ್ಯಗಳನ್ನು, ಭದ್ರವಾಗಿ ಕಾಪಾಡಿಕೊಂಡು, ಮುಂದಿನ ಪೀಳಿಗೆಗೂ ಆದರ್ಶ ವ್ಯಕ್ತಿಗಳಾಗಿ ಬಾಳಿದ ಕೆಲವೇ ಕೆಲವು ಮಹಾನ್ ಕಲಾವಿದೆಯರಲ್ಲಿ ಬಿ. ಸರೋಜಾದೇವಿ ಅಗ್ರಗಣ್ಯರು.
ಸೌಂದರ್ಯದಲ್ಲಿ ಅಪ್ರತಿಮೆ. ಅಭಿನಯದಲ್ಲಿ ಸಾಕ್ಷಾತ್ ಸರಸ್ವತಿ. ನಡತೆಯಲ್ಲಿ ಸಾಕ್ಷಾತ್ ಅರುಂಧತಿ.
ಐವತ್ತು ವರ್ಷಗಳ ಕಾಲ ದಕ್ಷಿಣ ಭಾರತದ ಸಿನಿಮಾ ಪ್ರಪಂಚದ ಎವರ್ ಗ್ರೀನ್” ನಾಯಕಿಯಾಗಿ, ಎಂ. ಜೀ. ರಾಮಚಂದ್ರನ್, ಎನ್. ಟಿ. ಆರ್, ಡಾ. ರಾಜಕುಮಾರ್, ಶಿವಾಜಿ ಗಣೇಶನ್, ರಂತಹ “ಶಾಶ್ವತ ನಾಯಕರ ಜೊತೆ ಸರಿಸಾಟಿಯಾಗಿ ವಿಜೃಂಭಿಸಿದ ಏಕೈಕ ತಾರೆ ಬಿ. ಸರೋಜಾದೇವಿ.
ದಕ್ಷಿಣ ಚಿತ್ರರಂಗದಲ್ಲಿ ಪ್ರಥಮ ಬಾರಿಗೆ ಅತೀ ಹೆಚ್ಚು ಸಂಭಾವನೆ ಪಡೆದ ಶ್ರೀಮಂತ ನಟಿ. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಕಥೆಗಳಿಗೆ ತನ್ನ ಕಲಾ ವೈಭವದಿಂದ ಚಿನ್ನದ ಹೊಳಪು ನೀಡುತ್ತಿದ್ದ ಚಿನ್ನದಂತಹ ಹುಡುಗಿ.
ಹೊನ್ನಪ್ಪ ಭಾಗವತರ, ಬಿ. ಆರ್. ಪಂತುಲ್, ಬಿ. ಎಸ್. ರಂಗಾರಂತಹ “ಕಲಾಬ್ರಹ್ಮ”ರ ಗರಡಿಯಲ್ಲಿ ಪಳಗಿದ ಈ ಕಲಾದೇವಿಗೆ ಸರೋಜಾ “ದೇವಿ” ಎನ್ನುವ ಹೆಸರೇ ಸಾರ್ಥಕವಾಗಿತ್ತು.
‘ಕಿತ್ತೂರು ಚೆನ್ನಮ್ಮ’ ಚಿತ್ರದ ವೀರ ನಾಯಕಿ “ಚೆನ್ನಮ್ಮ”, “ಅಮರಶಿಲ್ಪಿ ಜಕಣಾಚಾರಿ” ಚಿತ್ರದ “ಮಂಜರಿ”, “ಬಬ್ರುವಾಹನ” ಚಿತ್ರದ “ಚಿತ್ರಾ0ಗದೆ”, “ಶ್ರೀನಿವಾಸ ಕಲ್ಯಾಣ” ಚಿತ್ರದ ಸಾಕ್ಷಾತ್ ಲಕ್ಷ್ಮೀದೇವಿ, “ಭಾಗ್ಯವಂತರು” ಚಿತ್ರದ ಸದ್ಗೃಹಿಣಿ “ಪಾರ್ವತಿ”, ಒಂದೇ ಎರಡೇ ಎಲ್ಲವೂ ಬಿ. ಸರೋಜಾದೇವಿ ಎಂಬ ವಿಶ್ವ ವಿದ್ಯಾಲಯದ ಪಠ್ಯಗಳು.
ಮೂಲತ: ಚೆನ್ನಪಟ್ಟಣ ತಾಲ್ಲೂಕಿನ ದಶವಾರ ಗ್ರಾಮದಲ್ಲಿ ಜನಿಸಿದ ಬಿ. ಸರೋಜಾದೇವಿಯವರಿಗೆ ಈ ಮಣ್ಣಿನ ಸಂಸ್ಕೃತಿಯ ಪಾಠ ಅವರ ತಂದೆ ತಾಯಿಯವರಿಂದಲೇ ಬೆಳೆದು ಬಿಟ್ಟಿತ್ತು. ಹೀಗಾಗಿ ಸಿನಿಮಾ ಎಂಬ ಅರಮನೆಯ ಮಹಾರಾಣಿ ಯಾಗಿದ್ದರೂ ಸೌಜನ್ಯ, ಸರಳತೆ ಮರೆಯಲಿಲ್ಲ.
ಎಂ. ಜೀ. ರಾಮಚಂದ್ರರ ಜೊತೆ ನಾಯಕಿಯಾಗಿ 26 ಸೂಪರ್ ಹಿಟ್ ಚಿತ್ರಗಳನ್ನೂ, ಶಿವಾಜಿ ಗಣೇಶನ್ ಜೊತೆ 18 ಯಶಸ್ವಿ ಚಿತ್ರಗಳನ್ನೂ ನೀಡಿದ್ದರೂ, ಯಾವುದೇ ಗಾಸಿಪ್ ದಂತಹ ಅಪಸವ್ಯಗಳಿಗೆ ಅವಕಾಶ ನೀಡದ ಸಜ್ಜನ ಕಲಾವಿದೆ.
ಹಾಗೇ ನೋಡಿದರೇ ಬಿ. ಸರೋಜಾದೇವಿಯವರ ಅಪ್ರತಿಮ ಸೌಂದರ್ಯಕ್ಕೆ ಅವರೇ ಸಾಟಿ. ಎಪ್ಪತ್ತರ ದಶಕದಲ್ಲಿ ಬಿ. ಸರೋಜಾದೇವಿ ಯವರ ಉಡುಗೆ ತೋಡುಗೆ, ಹೇರ್ ಸ್ಟೈಲ್, ಧರಿಸುವ ಆಭರಣಗಳು ಅವರ ಮುದ್ದಾದ ನಗು ಎಲ್ಲವೂ ಆಗಿನ ಕಾಲ ಘಟ್ಟದ ಮಹಿಳೆಯರಿಗೆ ಆದರ್ಶವಾಗಿದ್ದವು.
ಇಂತಹ ಮಹಾನ್ ಕಲಾವಿದೆಯ ತೆರೆಯ ಹಿಂದಿನ ಬದುಕು ಕೂಡ ಅಷ್ಟೇ ಮೌಲ್ಯಯುತವಾಗಿತ್ತು. ಕೈ ಹಿಡಿದ ಪತಿ ಶ್ರೀಹರ್ಷ ಸರೋಜಾರಿಗೆ ಕಣ್ಣುರೆಪ್ಪೆಯಾಗಿದ್ದರು. ಅಂತೆಯೇ, ಮದುವೆಯ ನಂತರವೂ ನಾಯಕಿಯಾಗಿಯೇ ಮಿಂಚಿದ ಅದೃಷ್ಟವಂತೆ.
ಪತಿಯ ಅಕಾಲಿಕ ನಿಧನದ ನಂತರ ಬಣ್ಣದ ಬದುಕಿನಿಂದ 5 – 6 ವರ್ಷ ದೂರವೇ ಉಳಿದುಬಿಟ್ಟರು.
ಆದರೇ ಬೆಳ್ಳಿತೆರೆ ಮಾತ್ರ ಇವರನ್ನು ಬಿಡಲಿಲ್ಲ.
ಆಪ್ತರ ಒತ್ತಾಯದ ಮೇರೆಗೆ ಚಿತ್ರದಲ್ಲಿ ನಟಿಸಿದರೂ, ಎಲ್ಲ ಅರ್ಹತೆ ಇದ್ದರೂ, ನಾಯಕಿ ಪಾತ್ರ ಮಾಡಲು ಒಪ್ಪದ ಮಹಾಸಾಧ್ವಿ. ನಂತರ ಅಭಿನಯಿಸಿದ್ದು ಕೇವಲ ಪೋಷಕ ಪಾತ್ರಗಳಲ್ಲಿ.
ವಿವಾದವೆಂಬ ಸುಂಟರಗಾಳಿ ಬಿ. ಸರೋಜಾದೇವಿಯವರನ್ನು ಕಂಡರೆ ಹೆದರುತ್ತಿತ್ತೇನೋ.
26 ಯಶಸ್ವಿ ಚಿತ್ರಗಳಲ್ಲಿ ಎಂ. ಜೀ. ಆರ್ ಜೊತೆ ನಾಯಕಿ ಯಾಗಿದ್ದರೂ, ನಂತರ ಎಂ. ಜೀ. ಆರ್ ಜಯಲಲಿತಾರ ಸುಳಿಗೆ ಸಿಕ್ಕು ಬಿ. ಸರೋಜಾದೇವಿಯವರನ್ನು ತಮ್ಮ ಚಿತ್ರಗಳಿಂದ ದೂರ ಮಾಡಿದರೂ….
ಸರೋಜಾದೇವಿ ಅವರು ಸೌಜನ್ಯದಿಂದಲೇ ಪ್ರತಿಕ್ರಿಯೆ ನೀಡಿ, ಕನ್ನಡ ಚಿತ್ರರಂಗಕ್ಕೆ ಮರಳಿದರು, ಹೊರತಾಗಿ ಯಾರನ್ನೂ ದೂರಲಿಲ್ಲ.
ಅಂತೆಯೇ ಎಂ. ಜೀ. ಆರ್. ಹಾಗೂ ಜಯಲಲಿತಾ ಕೂಡ ತಮ್ಮ ಕೊನೆಯ ಉಸಿರು ಇರುವವರೆಗೂ ಬಿ. ಸರೋಜಾದೇವಿಯವರನ್ನು ತುಂಬಾ ಗೌರವದಿಂದಲೇ ಕಂಡರು.
ಹಾಗೇ ನೋಡಿದರೇ ಬಿ. ಸರೋಜಾದೇವಿಯವರ ಬದುಕಿನಲ್ಲಿ ನಡೆದ ಒಂದು ತಮಾಷೆ ಸಂಗತಿ ಎಂದರೆ, ಎಸ್. ಎಂ. ಕೃಷ್ಣ ಮುಖ್ಯ ಮಂತ್ರಿಯಾಗಿದ್ದಾಗ ಒಂದು ಕಾರ್ಯಕ್ರಮದ ವೇದಿಕೆಯಲ್ಲಿ ಎಸ್. ಎಂ. ಕೃಷ್ಣ ಮಾತಾಡುತ್ತ….
“ನನ್ನ ಕಾಲೇಜು ದಿನಗಳಲ್ಲಿ ನಾನು ಬಿ. ಸರೋಜಾದೇವಿ ಯವರ ಅಪ್ಪಟ ಅಭಿಮಾನಿಯಾಗಿದ್ದೆ. ಅವರು ಒಪ್ಪಿಗೆ ನೀಡಿದ್ದರೆ, ಅವರನ್ನೇ ಮದುವೆಯಾಗಬೇಕು ಎಂದು ಕೊಂಡಿದ್ದೆ….” ಎಂದು ಬಹಿರಂಗವಾಗಿ ಹೇಳಿದಾಗ…. ಅದೇ ವೇದಿಕೆಯ ಮೇಲೆ ಕುಳಿತಿದ್ದ ಬಿ. ಸರೋಜಾದೇವಿ ಹಾಗೂ ಕೃಷ್ಣರ ಪತ್ನಿ ಪ್ರೇಮಾಕೃಷ್ಣ ಮನಸಾರೆ ನಕ್ಕು ಬಿಟ್ಟಿದ್ದರು. ಅವರೆಲ್ಲ ತುಂಬಿದ ಕೊಡ.
ಹೌದು, ಬಿ. ಸರೋಜಾದೇವಿ ಇಂದು, ದಂತಕಥೆಯ ಒಂದು ಅಧ್ಯಾಯವಾಗಿದ್ದಾರೆ. ಸಿನಿಮಾ ಎಂಬ ಮೋಜಿನ ಜಾತ್ರೆಯಲ್ಲಿದ್ದರೂ ತಮ್ಮ ಮೇರು ಸದೃಶ ವ್ಯಕ್ತಿತ್ವದಿಂದ ಅಮರರಾಗಿದ್ದಾರೆ….
-ಅನಿಲ್ ಕುಲಕರ್ಣಿ, ಹವ್ಯಾಸಿ ಪತ್ರಕರ್ತರು, ಹುಬ್ಬಳ್ಳಿ