ಅನುದಿನ ಕವನ-೧೭೭೭, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಗಂಡಸೆರಲ್ಲರೂ ಕೆಟ್ಟವರಲ್ಲ ..

ಗಂಡಸೆರಲ್ಲರೂ ಕೆಟ್ಟವರಲ್ಲ ..

ಅರೆ ಇವಳೇನು ಇದಕ್ಕಿದಂತೆ
ಹಾಯಿ ತಪ್ಪಿದ ದೋಣಿಯಂತೆ,
ಅಲೆಗಳ ಮಧ್ಯ ತೇಲುತ್ತಾ
ಸಾವಿರ ಮಾತುಗಳ ತೂಕ ಹೊತ್ತಂತೆ,
ಫೆಮಿನಿಸಂನ ಹೊಳೆ ಬಿಟ್ಟಂತಿದೆ ಎಂದು
ನೀವಂದುಕೊಂಡರೆ,
ನನಗದು ಅಚ್ಚರಿಯೇನಲ್ಲ.

ರಾತ್ರಿ ಊರೂರು ದಾಟಿ ಬರುವ
ಅವರ ಹೆಜ್ಜೆಗಳಲ್ಲಿ
ದಣಿದ ಗಾಳಿಯ ನಾದವಿದೆ.
ಕಾಲಿನ ಬಿರುಕುಗಳಲ್ಲಿ
ಹೆಮ್ಮೆಯ ಹೂವುಗಳು ಅರಳುತ್ತವೆ.
ಅವರ ಕೈಯಲ್ಲಿನ ತಿಂಡಿಯ ಚೀಲ
ಕಾಳಜಿಯ ಬಿತ್ತನೆಯೇ ಆಗಿರುತ್ತದೆ.

ಅವರು ಮನೆ ಬಾಗಿಲಿನು ತಲುಪಿದ ಕ್ಷಣ
ನೆಲದ ನಕ್ಷತ್ರಗಳೂ ತಲೆಬಾಗುತ್ತವೆ.
ಮನೆಗೆ ಮರಳುವ ಆತುರದಲ್ಲಿ
ಎಡವಿ ಬಿದ್ದ ಪಾದಗಳ ನೋವು,
ಬೀದಿ ಬದಿಯ ಕಲ್ಲುಗಳಲ್ಲಿ ತಂತಾನೆ
ಮೌನ ಕವಿಯ ಕಥೆಗಳ ಕೆತ್ತಿಕೊಳ್ಳುತ್ತದೆ.

ಕೊರೆವ ಚಳಿಯಲ್ಲೂ
ಚಾಪೆ ಹಾಸಿಕೊಂಡು ಮಲಗುವ
ಅವರೊಳಗಿನ ಸಹನೆಗೆ ಕತ್ತಲಿನಲ್ಲೂ
ನಸುಕಿನ ಬೆಳಕು ಕಂಡಂತಾಗುತ್ತದೆ.

ಹಾಗಾಗಿ,ಗಂಡಸರೆಲ್ಲರೂ ಕೆಟ್ಟವರಲ್ಲ..


-ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು
—–

Leave a Reply

Your email address will not be published. Required fields are marked *