ಅನುದಿನ ಕವನ-೧೭೯೩, ಕವಯತ್ರಿ: ಭುವನಾ ಹಿರೇಮಠ, ಕಿತ್ತೂರು, ಕವನದ ಶೀರ್ಷಿಕೆ: ಒಂದು ಮಧ್ಯಂತರ

ಒಂದು ಮಧ್ಯಂತರ

ಬಿಟ್ಟು ಹೋದೆ ನೀನು ನಡುದಾರಿಯಲಿ
ಪೋಣಿಸುತ್ತಿರುವಾಗ ನಾನು ಕೊನೆಯ ಮುತ್ತನು
ನುಂಗಿ ಹಾಕಿತು ಮಾತು ಕೊನೆಯ ಮೌನವನು

ನಟ್ಟಿರುಳ ಕತ್ತಲೆ ಸ್ಫೋಟಿಸುತ್ತಿತ್ತು
ಕಟ್ಟಕಡೆಯ ನಕ್ಷತ್ರವೂ ಸುಟ್ಟು ಕರಕಲಾಗುತಿತ್ತು

ಬರಿದಾಗುತ್ತಿರೋ ಕಡಲ ಕೊನೆಯ
ಹನಿಗಳಲಿ ಕಡಲ ತೀರ ಉಸಿರಾಡುತಿತ್ತು

ಬರಡು ನೆಲದ ಬೇರುಗಳಲಿ
ನಾಡಿ ಮಿಡಿಯುವ ಭೂಮಿ
ಪ್ರತಿ ತಂತುವಿನಲ್ಲಿ ಜೀವ ಹಿಡಿದಿತ್ತು

ಸ್ಪರ್ಶದಿಂದ ಮರುಜೀವತಾಳಿದ ಅಹಲ್ಯೆ
ಮತ್ತೆ ಕಲ್ಲಾಗಿ ಕಾಯಲು
ನೆಲವೇ ಇಲ್ಲವಾಗಿದೆ

ಕಾಡಿಲ್ಲದ ನಾಡಿಲ್ಲದ ಕೆಡುಗಾಲವಿದು
ಹೊಸದೊಂದು ಲೋಕವೇ ಸೃಷ್ಟಿಯಾಗಬೇಕು
ನಾವಿಬ್ಬರೂ
ಮತ್ತೆ ಒಂದಾಗಲು

-ಭುವನಾ ಹಿರೇಮಠ, ಕಿತ್ತೂರು

Leave a Reply

Your email address will not be published. Required fields are marked *