ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ

ಮಗಳು, ಮನುಷ್ಯತ್ವ, ಮರ್ಯಾದೆ, ಮನೆತನ
ಈಗೊಂದು ಪ್ರಶ್ನೆ ನೀಡಿದೆ
ನಾನಂದುಕೊಂಡಿದ್ದೆ
ಆತ
ಮಗಳನ್ನು ಆಯ್ದುಕೊಳ್ಳುತ್ತಾನೆಂದು!
ಮಗಳೇ ಶ್ರೇಷ್ಠ ಮನುಷ್ಯಳು,
ಹೆಣ್ಣಿನ ತಂದೆ ಪದವಿಗಿಂತ
ಯಾವುದು ದೊಡ್ಡ ಮರ್ಯಾದೆ,
ಮಗಳೇ ಮನೆತನ
ಮಗಳೇ ಕೊನೆತನ… ಹೀಗೆ
ಅವನು ಬೀಗಿ ಉತ್ತರಿಸಬಹುದೆಂದು
ಭಾವಿಸಿದೆ..
ಅವನು ಮರ್ಯಾದೆ ಆಯ್ದುಕೊಂಡ,
ಆಗ ನಡುಗಿತು ನೋಡಿ ಆ ಪದ, ಬೆವೆತು!
ಅವನು
ಅ ಆ
ತಿದ್ದಿಸುವಾಗಲೂ
ಕಲಿಸಿದ್ದನಂತೆ
ಅ ಅಂದರೆ ‘ಅಂತರ’
ಅ ಎಂದರೆ ‘ಅನ್ಯ ಕೋಮು’
ಮಗಳು ತಿದ್ದಿದ್ದು
ಅ ಗೆ ಅಪ್ಪ
ಅ ಗೆ ಅಂಬೇಡ್ಕರ
ಅ ಗೆ ಅಂತಃಕರಣ
ಅ ಗೆ ಅಕ್ಕರೆ..
ಇವಳಿಗೆ ಅಪ್ಪ ಕಲಿಸಿದ್ದು ಸೇರಲಿಲ್ಲ
ಅವನಿಗೆ ಮಗಳು ತಿದ್ದಿದ್ದು ಇಳಿಯಲಿಲ್ಲ!
ಮನುಷ್ಯತ್ವ ಉಳಿಯಲಿಲ್ಲ…

-ಸದಾಶಿವ ಸೊರಟೂರು, ಹೊನ್ನಾಳಿ
—–
