ಅನುದಿನ ಕವನ-೧೮೨೨, ಹಿರಿಯ ಕವಿ: ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಕೈಯ ಲೇಖನಿಯೇ ಧಿಕ್ಕರಿಸತೊಡಗಿದಾಗ ಏನೆಂದು ಬರೆಯಲಿ
ಕಾಗದವೇ ಕೆಕ್ಕರಿಸಿ ನೋಡತೊಡಗಿದಾಗ ಏನೆಂದು ಬರೆಯಲಿ

ಮಾಮರದ ಇನಿದನಿಯ ಹಕ್ಕಿಯ ಕೊರಳನೇ ಹಿಸುಕುತಿಹರು
ಸವಿಯಾದ ಕೆಂದಳಿರೇ ದಹಿಸತೊಡಗಿದಾಗ ಏನೆಂದು ಬರೆಯಲಿ

ಮುದ ನೀಡುವ ತಂಗಾಳಿಯ ಬಂಧಿಸಿ ಉಸಿರುಕಟ್ಟಿಸುತಿಹರು
ಕಾವ ಕೈಯೇ ಕತ್ತು ಹಿಸುಕತೊಡಗಿದಾಗ ಏನೆಂದು ಬರೆಯಲಿ

ಬದುಕಿನ ದಾರಿ ತನ್ನ ಸುತ್ತ ತಾನೇ ಸುರುಳಿ ಸುತ್ತಿಕೊಳುತಿಹುದು
ಕೈ ದೀಪವೇ ಕತ್ತಲನು ನೀಡತೊಡಗಿದಾಗ ಏನೆಂದು ಬರೆಯಲಿ

ಸಂತಸದ ಅಲೆಗಳೇ ನಿಟ್ಟುಸಿರುಗಳಾಗಿ ಸಾಗರವನು ದಹಿಸುತಿಹವು
ಸಿದ್ಧನ ಉಸಿರೇ ಕಣ್ಮುಂದೆ ಬಿಕ್ಕತೊಡಗಿದಾಗ ಏನೆಂದು ಬರೆಯಲಿ


-ಸಿದ್ಧರಾಮ ಕೂಡ್ಲಿಗಿ