ಅನುದಿನ ಕವನ-೧೮೪೩, ಹಿರಿಯ ಕವಿ:ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಪಾರಿವಾಳದ ಗುಟರು….

ಪಾರಿವಾಳದ ಗುಟರು…..

ನಾನು ದಿನಚರಿ ಪುಸ್ತಕದಲ್ಲಿ
ಬರೆಯುವುದು
ತೀರಾ ಕಡಿಮೆ, ಇವತ್ತು ಸುಮ್ಮನೆ ಹಾಳೆಗಳನ್ನು ತಿರುವಿ
ನೋಡಿದೆ;

ಅಲ್ಲಿನ ಕೆಲವು ಸಾಲುಗಳ ಕೆಳಗೆ
ತಾರೀಖು ನಮೂದಿಸಿದ್ದೇನೆ,
ಇನ್ನು ಕೆಲವು ಕಡೆ ಪೆನ್ಸಿಲ್ನಲ್ಲಿ ಬರೆದ ಸಣ್ಣ ಸಣ್ಣ
ಟಿಪ್ಪಣಿಗಳಿವೆ,

‘ಇವತ್ತು ಅವಳನ್ನು ನೋಡಿದೆ, ಮೊದಲು
ಅವಳು ನೋಡಿದಳೋ,
ಇಲ್ಲ ಮೊದಲು ನಾನು ನೋಡಿದೆನೋ;
ಹೇಳುವುದು ಕಷ್ಟ,

ಅವಳು ನನ್ನನ್ನು ನೋಡಿ ನಕ್ಕು ಪ್ಲಾಟ್-
ಫಾರ್ಮ್ ಇಳಿದು ಸೀದಾ ನನ್ನತ್ತ ಬಂದಳು
ನನ್ನ ಅವಳ ಕಣ್ಣು ಕೂಡಿದ್ದು
ಜನಜಂಗುಳಿಯ ನಡುವೆ,

ಕೈಹಿಡಿದು ಅಲ್ಲಿಂದ ಹೆಜ್ಜೆ ಹಾಕಿದೆವು
ತಿರುಗಿ ನೋಡದೆ,
ಇಡೀ ರಾತ್ರಿ
ಮಾತಾಡುತ್ತಲೇ ಇದ್ದೆವು,

ಜೊತೆಗಿದ್ದ ನಾವು
ಚಳಿಯಲ್ಲೂ ಬೆಚ್ಚಗಿದ್ದರೆ, ಉಳಿದೆಲ್ಲದೂ ಒದ್ದೆ
ಮತ್ತು ತಣ್ಣಗೆ. ಹೊರಗೆ, ನಿಲ್ಲದ
ಪಾರಿವಾಳದ ಗುಟರು…

-ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು
—–