Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೮೪೮, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಅರಣ್ಯ ರೋಧನ...! - Karnataka Kahale

ಅನುದಿನ ಕವನ-೧೮೪೮, ಕವಿ: ಎ.ಎನ್.ರಮೇಶ್, ಗುಬ್ಬಿ., ಕವನದ ಶೀರ್ಷಿಕೆ: ಅರಣ್ಯ ರೋಧನ…!

“ಇದು ನಮ್ಮ ನಿಮ್ಮದೇ ಜೀವಗಳ ಸೂಕ್ಷ್ಮ ಸಂವೇದನೆಗಳ ಅನಾವರಣದ ಸತ್ಯ ಕವಿತೆ. ಬಂಧಾನುಬಂಧಗಳಲ್ಲಿ ನರಳುವ ವೇದನೆ ನಿವೇದನೆಗಳ ನಿತ್ಯ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಸಂಕೀರ್ಣ ಸಂಗತಿಗಳ ಸಾರವಿದೆ. ಅರ್ಥೈಸಿದಷ್ಟೂ ಬಾಳಿನ ವಿಷಮ ವಿಷಾದ ಘಳಿಗೆಗಳ ವಿಸ್ತಾರವಿದೆ. ಇದು ಆಗಾಗ ಅನುಭವಿಸುವ ಸಕಲರ ಬದುಕಿನ ಸ್ವಾನುಭವವೂ ಹೌದು. ಯುಗ ಯುಗದ ಜಗದ ಲೋಕಾನುಭಾವವೂ ಹೌದು. ಏನಂತೀರಾ.?”

-ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಅರಣ್ಯ ರೋಧನ.!

ನಮ್ಮವರ ಕ್ರೋಧ ಆಕ್ರೋಶಗಳ ಸಿಡಿಲು
ಸಿಡಿದು ಬಡಿವುದು ನಮಗೇ ಮೊದಲು
ಅವರ ಕೋಪ ಹತಾಷೆಗಳ ಹಾಲಹಲ
ಹರಿದು ಆಗುವುದು ನಮ್ಮೆದೆ ದಾವಾನಲ.!

ಏನು ಪ್ರೇರಣವೋ ಯಾರು ಕಾರಣವೋ
ಅರ್ಥವಾಗದ ನಮ್ಮ ಜೀವ ಅಯೋಮಯ
ಯಾವ ಅಸಹನೆಯೋ ಎಂಥ ನೋವೋ
ಬಲಿಯಾಗಿ ನರಳುವುದು ನಮ್ಮ ಹೃದಯ.!

ಸುಡುವ ಅವರ ಒಡಲಿನಾ ಜ್ವಾಲಾಮುಖಿ
ಆಸ್ಫೋಟವಾದಷ್ಟು ನಮ್ಮ ಜೀವ ವಿಹ್ವಲ
ಧಗ ಧಗಿಸುವ ಆ ಎದೆಗುಂಡದ ಅಗ್ನಿಮುಖಿ
ವಿಸ್ಪೋಟವಾದಷ್ಟು ನಮ್ಮ ಭಾವ ವಿಲವಿಲ.!

ಅವರ ಆ ಕುದಿ ಬೇಗುದಿಗಳ ಶರಬಾಣಕೆ
ಮೊದಲು ಗುರಿಯಾಗುವುದು ನಮ್ಮದೇ ಶಿರ
ಅವರ ಕೋಪ ಕಲಹಗಳ ಗಧಾ ಪ್ರಹಾರಕೆ
ಉಡುಗಿ ನಡುಗುವುದು ನಮ್ಮದೇ ನರ ಸ್ವರ.!

ಆ ತುಮುಲ ತಲ್ಲಣಗಳ ಚರ್ವಿತಚವರ್ಣಕೆ
ಛಿದ್ರ ಛಿದ್ರವಾಗುವುದು ನಮ್ಮೊಡಲ ಶಾಂತಿ
ಆ ಬೇಗೆ ಧಗೆ ಹೊಗೆಯ ಸುಡು ಕಿಡಿನುಡಿಗೆ
ಮೂಕವಾಗಿ ರೋಧಿಸುವುದು ನಮ್ಮೆದೆ ಪ್ರೀತಿ.!

ಅವರೊಳಗಿನ ಚಂಡಮಾರುತದ ಹೊಡೆತಕೆ
ಅತಂತ್ರವಾಗುವುದು ತೀರದ ನಮ್ಮ ಬದುಕು
ಆ ವಿಷ ವಿಷಾದ ಸಂವೇದನೆ ಭೋರ್ಗರೆತಕೆ
ಕೊಚ್ಚಿ ಹೋಗುವುದು ನಮ್ಮ ನೆಮ್ಮದಿ ಬೆಳಕು.!

ನಮ್ಮಯ ಜೀವ-ಜೀವನ ಬಂಧನಗಳೇ ಹೀಗೆ
ಕನಲಿ ಕಂಗಾಲಾಗುವುದು ನಮ್ಮವರ ನಡೆಗೆ
ಬುವಿಯ ಬದುಕಿನ ಭಾವ-ಬಂಧಗಳೇ ಹಾಗೆ
ಒಮ್ಮೊಮ್ಮೆ ನರಳಬೇಕು ನಮ್ಮದಲ್ಲದ ತಪ್ಪಿಗೆ.!


-ಎ.ಎನ್.ರಮೇಶ್, ಗುಬ್ಬಿ.