ಅನುದಿನ ಕವನ-೧೮೭೦, ಕವಿ: ಜಬೀವುಲ್ಲಾ ಎಂ. ಅಸದ್, ಹಿರಿಯೂರು, ಕವನದ ಶೀರ್ಷಿಕೆ: ಕವಿಯಾಗದೆ ಉಳಿದಿದ್ದೇನೆ!

ಕವಿಯಾಗದೆ ಉಳಿದಿದ್ದೇನೆ!

ಅವರು ಹೇಳುತ್ತಾರೆ
ಎಲ್ಲರೂ ಮೆಚ್ಚುವ ಹಾಗೆ
ಕವಿತೆ ಕಟ್ಟಬೇಕೆಂದು

ಕವಿಯೇನು ಕಾಂಟ್ರಾಕ್ಟರೆ
ಗೋಡೆಗಳ ಹಾಗೆ
ಕವಿತೆಗಳ ಕಟ್ಟಲು?

ನೆಲದಲ್ಲಿ ಅಡಗಿಸಿದ ಟೆಲಿಫೋನಿನ ವೈರುಗಳ
ಜಟಿಲ ಸಂಯೋಗದಂತೆ
ಸಾಲುಗಳ ಹೆಣಿಯಬೇಕಂತೆ
ಸುಲಭಕ್ಕೆ ಅರ್ಥವಾಗದಂತೆ

ಯಾರಿಗೂ ಅರ್ಥವಾಗದ ಕವಿತೆಗಳನ್ನು
ಮತ್ತೇಕೆ ಬರೆಯುವುದು
ಬೆಟ್ಟಕ್ಕೆ ಮಣ್ಣು ಹೊರುವ ಕೆಲಸ
ನನ್ನಿಂದಂತು ಆಗದು

ರೂಪಕಗಳ ಲೆಕ್ಕಾಚಾರದಿ
ಅಳೆದು, ತೂಗಿ
ಅಸಂಬದ್ಧ, ಅಪಕ್ವ ವಿಚಾರಗಳ ಹಂಸತುಲಿಕಾತಲ್ಪದಿ
ವಿರಾಜಮಾನವಾಗಿಸಿ
ಕವಿತೆಗಳ ಮೆರೆಸಬೇಕಂತೆ
ಪ್ರಶಸ್ತಿಗಳ ಕಿರೀಟ ಮುಡಿಸಿ
ಪ್ರತಿಷ್ಠೆಯ ಅರಿವೆ ತೊಡಿಸಬೇಕಂತೆ

ಹೌದೇನು?
ಅರೆರೆ…. ಎಂಥಾ ಕೆಲಸವಾಯಿತು!

ಇದಾವುದರ ಅರಿವಿಲ್ಲದ ನಾನು
ನನ್ನ ಕವಿತೆಗಳನ್ನು ಬೆತ್ತಲಾಗಿಯೇ
ಬಯಲಿಗೆ ಬಿಟ್ಟಿದ್ದೇನೆ
ಅನಾಥವಾಗಿಸಿ
ನಿರ್ಗತಿಕರನ್ನಾಗಿಸಿದ್ದೇನೆ

ಎಷ್ಟು ಸೋಜಿಗ ಸಂಗತಿ ಇದು
ಕವಿತೆಗಳ ಬರೆದು ಸಹ
ಕವಿಯಾಗದೆ ಉಳಿದಿದ್ದೇನೆ.


-ಜಬೀವುಲ್ಲಾ ಎಂ. ಅಸದ್, ಹಿರಿಯೂರು

Leave a Reply

Your email address will not be published. Required fields are marked *