
ಆಕಾಶದಗಲಕ್ಕೂ ಹರಡಿದ
ಬಿರಿಮುಡಿ ಕೇಶದೆಳೆಗಳು
ನವಿರಾಗಿ ಭುಜ ನೇವರಿಸಿ ಆಪ್ತ…
ಕಣಕಣಗಳಲ್ಲೂ ಸ್ಪರ್ಶಮಣಿಯ
ದೇದೀಪ್ಯಮಾನ ಮಿಂಚು !
ಬಲಗೈನ ಡಮರುಗದ ಸದ್ದಿಗೆ
ತೆರೆದೆದೆಯ ಪಕ್ಕದ ಹೆಣ್ತನದ
ಹೃದಯದೊಳು ಢಮಢಮ ಬಡಿತ
ಏರಿಳಿಯುತ್ತ ಉನ್ಮತ್ತ ಭಾವ.
ಎರಡೂ ಹಣೆಗಳ ಬೆಸೆದ
ಮೂರನೇ ಕಣ್ಣು ತೆರೆದುಕೊಂಡು
ಹೊತ್ತಿದ ಜ್ವಾಲೆಯಲಿ ಅರ್ಧಾಂಗಗಳು
ಅರಳರಳಿ ಸುಖಮಿಲನವಾಗಿ ವಿರಹ ಭಸ್ಮ.
ಕೊರಳ ಬಳಸಿದ ಹಾವು ಮೈಪೂರಾ
ಹರಿದಿಳಿದು ಕಾಮಕಾಮನೆಗಳ
ಉಚ್ವಾಸ ನಿಶ್ವಾಸಗಳ ಲಯಗತಿಗೆ ತೃಪ್ತ ಒಲವು
ಚಂದ್ರ ಚಕೋರಿಯ ತಣಿವು
ದೇವಗಂಗೆ ಸುರಿಸುರಿದು ತಣಿಸಿ
ತೀವ್ರ ಪ್ರಣಯೋನ್ಮಾದ
ಮುಡಿಯಿಂದ ಅಡಿಯವರೆಗೂ….
ಸ್ವಚ್ಛ ಅಭಿಷೇಕದ ತಂಪು ತಂತ್ರ
ಜೀವಸೃಷ್ಟಿಯ ಮಹಾಮಂತ್ರ
ಲೋಕ ಸವಿಯಲಿ ಬಿಡು ಹೀಗೆ..
ಶಿವಶಿವೆಯರ ಸುಖಲೀಲೆ
ಸಖಸಖಿಯರಿಗೊಲಿದ ಪ್ರೇಮಿಸುವ ಕಲೆ.

-ಡಾ. ಕೆ.ಎನ್.ಲಾವಣ್ಯ ಪ್ರಭಾ, ಮೈಸೂರು
