ಅನುದಿನ ಕವನ-೧೮೮೩, ಕವಿ: ಡಾ.ಲಕ್ಷ್ಮಣ ವಿ.ಎ, ಬೆಂಗಳೂರು, ಕವನದ ಶೀರ್ಷಿಕೆ: ಹೀಗೊಂದು ಸುದ್ದಿ ಇದೆ

ಹೀಗೊಂದು ಸುದ್ದಿ ಇದೆ

ಒಂದೂರಲ್ಲಿ
ಒಬ್ಬ ಕವಿ ಇದ್ದಾನಂತೆ ;
ಇವನು ಚಿಕ್ಕವನಿರುವಾಗ ‘ಮೇಜು’
ಕುರ್ಚಿಯ ಮೇಲೆಲ್ಲಾ ಪ್ರೀತಿಸಿದ
ಹುಡುಗಿಯ ಹೆಸರು ಗೀಚುತ್ತಿದ್ದನಂತೆ!

ಈಗ ದೊಡ್ಡ ಕವಿಯಂತೆ; ಬಲು ನಾಜೂಕಾಗಿ
ಈಗ ಇ ‘ಮೇಜು’ ಮಾತ್ರ ಬಳಸುತ್ತಾನಂತೆ !

ಇಳಿ ಬಿದ್ದ ಗಡ್ಡ
ನರೆತ ತಲೆ ಕೂದಲು ಬಗಲಿಗೆ
ತೊಗಲಿನ ಹಳೆಯ ಬ್ಯಾಗು ಸದಾ
ಮೌನಿ;ಅಪ್ಪಟ ಕವಿಯ ಗೆಟಪ್ಪಿನ
ಇವನು ಮಲಗಿದ್ದಾಗಲೂ ಥೇಟ್
ಮೂಲಾಕ್ಷರಗಳ ಹಾಗೆ ಬಾಗಿ ಮಲಗುತ್ತಾನಂತೆ
ಒಂದು ಸುದ್ದಿ ಇದೆ.ಖರೇ ಇದ್ದರೂ ಇರಬಹುದು.

‘ಮೋಜಿ’ ಗೆ ಕುಡಿಯುತ್ತಾನಂತೆ
ಸೇದುತ್ತಾನಂತೆ ಇದುವರೆಗೆ ನೋಡಿದವರಿಲ್ಲ ಯಾರೂ;
ಒಂಟಿಯಾಗಿ ಈತ ನಕ್ಕಿದ್ದು ಬಿಕ್ಕಿದ್ದು
ನೋಡಿದವರಿಲ್ಲ ಯಾರೂ ;

ಗುಪ್ತ ಹೆಸರಿನಲಿ ಬರೆಯುತ್ತಾನೆ
ಓದಿದ್ದೇವೆ;
ಹುಕಿ ಬಂದಾಗ ಹಕ್ಕಿಗಳಂತೆ ಹಾಡುತ್ತಾನೆ
ಕೇಳಿದ್ದೇವೆ;

ಸಂತೆಯಿಂದ ಸಂತೆಗೆ
ತಿರುಗುತ್ತಾನಂತೆ :ಊರಿನಿಂದ ಊರಿಗೆ
ಬರಿಗಾಲಲ್ಲೆ ತಿರುಗಿ ಗುಹೆಯಲ್ಲೇ
ಮಲಗುತ್ತಾನಂತೆ ;

ಎಲ್ಲಾ ಅಂತೆ ಕಂತೆ ನಿಜ ಯಾವುದು
ಸುಳ್ಳು ಯಾವುದು ? ಏ.ಐ.ಗೆ ಕೇಳಿದರೆ ಉತ್ತರಿಸಬಹುದೇನೊ ?

ಇವನ ಹೆಸರಿನಲಿ ಒಂದೂ ಪುಸ್ತಕ
ಸಂಕಲನ ಪ್ರಕಟವಾಗಿಲ್ಲ !

ಕಾರಣ ಗೊತ್ತಿಲ್ಲ ;

ಬರೆದಿದ್ದು ಹರಿಯುತ್ತಾನಂತೆ !
ಹಾಡಿದ್ದು ಮರೆಯುತ್ತಾನಂತೆ !

ನಿನ್ನದು ಯಾವೂರೆಂದರೆ
ಆಕಾಶ ತೋರುತ್ತಾನಂತೆ ;
ಎಲ್ಲಿರುತ್ತಿ ? ಎಂದು
ಕೇಳಿದರೆ ಬಯಲು ತೋರುತ್ತಾನಂತೆ :

ಹುಟ್ಟಿದ ಊರು ಏನು ಹೆಸರು
ಕುಲ ಜಾತಿ ಪಾತಿ ಚಪಾತಿ
ತಂದೆ ತಾಯಿ ಏನೊಂದೂ ಗೊತ್ತಿರದಿದ್ದರೂ

ಇವನು ಪ್ರತಿ ದಿನ ಹುಟ್ಟಿ
ಪ್ರತಿ ದಿನ ಸಾಯುವುದನ್ನು ಜನ ನೋಡಿದ್ದಾರಂತೆ ….!

ನಿಮಗೆ ಸಿಕ್ಕರೂ ಸಿಗಬಹುದು
ಅದೂ ನಿಮ್ಮೂರಲ್ಲೇ ! ಅವನ ಜೊತೆಗಿರುವ ಒಂದು
ಸೆಲ್ಪೀ ಕಳಿಸಿ ಮಾರಾಯ್ರೇ !


-ಡಾ.ಲಕ್ಷ್ಮಣ ವಿ ಎ, ಬೆಂಗಳೂರು