
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಾನಾ ಪಾಟೇಕರ್ ಎನ್ನುವುದು ಬರಿ ಹೆಸರಲ್ಲ, ಅದೊಂದು ಅಭಿನಯದ ಜ್ವಾಲಾಮುಖಿ. ಅವರ ಶಬ್ದಗಳ ಅಬ್ಬರ ಮತ್ತು ಕಣ್ಣೋಟದ ತೀವ್ರತೆಯಿಂದ ಇಡೀ ರಂಗಸ್ಥಳವೇ ಜಾಗೃತಗೊಳ್ಳುತ್ತಿತ್ತು. ಮಾತಿನ ಆವೇಗ, ಡೈಲಾಗ್ ಡೆಲಿವರಿಯ ವಿಶಿಷ್ಟ ಶೈಲಿ ಹಾಗೂ ಮೌನದ ಕ್ಷಣಗಳಲ್ಲೂ ಭಾವನೆಗಳನ್ನು ಕಟ್ಟಿಕೊಡುವ ಅವರ ಪಕ್ವತೆ ಪ್ರತಿಯೊಬ್ಬ ರಂಗಪ್ರೇಮಿಯನ್ನೂ ಮಂತ್ರಮುಗ್ಧಗೊಳಿಸುತ್ತದೆ.
’ಪರಿಂದಾ’ ಚಿತ್ರದ ಕ್ರೋಧದಿಂದ ಹಿಡಿದು, ‘ಕ್ರಾಂತಿವೀರ’ದಲ್ಲಿ ಸಮಾಜದ ಮುಖವಾಡಗಳನ್ನು ಕಳಚಿ ಎಸೆದ ಆವೇಶ, ‘ಖಾಮೋಶಿ’ಯ ನಿಶ್ಯಬ್ದದಲ್ಲಿ ಮೂಡಿದ ಮಿಡಿತ, ‘ಅಬ್ ತಕ್ ಛಪ್ಪನ್’ನ ಗಂಭೀರತೆ ಹಾಗೂ ‘ನಟಸಾಮ್ರಾಟ’ನಲ್ಲಿ ಜೀವಿಸಿದ ಅಭಿನಯದ ಶಿಖರ—ಇವೆಲ್ಲವೂ ಬೆಳ್ಳಿತೆರೆಯ ಮೇಲೆ ಅವರು ಬರೆದ ಶಾಶ್ವತ ಕಾವ್ಯಗಳು.
ಬರಿ ನಟನೆಯಷ್ಟೇ ಅಲ್ಲದೆ, ನಿಜ ಜೀವನದಲ್ಲೂ ‘ನಾಮ್ ಫೌಂಡೇಶನ್’ ಮೂಲಕ ರೈತರ ಕಣ್ಣೀರಿಗೆ ಮಿಡಿದ ಅವರ ಕಾಳಜಿ, ರೀಲ್ ಮತ್ತು ರಿಯಲ್ ಬದುಕಿನ ನಡುವಿನ ಅಂತರವನ್ನು ಅಳಿಸಿ ಹಾಕಿದೆ. ಭಾರತೀಯ ಕಲಾಪ್ರಪಂಚಕ್ಕೆ ಅವರು ನೀಡಿದ ಕೊಡುಗೆ ಮತ್ತು ಅವರ ಅಭಿನಯದ ಕಿಚ್ಚು ಎಂದಿಗೂ ಅಮರ.
-ಸೂರ್ಯಸಖ, ಬೆಳಗಾವಿ
