“ಅಂತರರಾಷ್ಟ್ರೀಯ ಮಹಿಳಾದಿನದ ಶುಭಕಾಮನೆಗಳೊಂದಿಗೆ ಸಮಸ್ತ ಸ್ತ್ರೀವೃಂದಕ್ಕೆ ಅರ್ಪಣೆ ಈ ಕಾವ್ಯಪ್ರಣತೆ”
ಭುವಿಯ ದಿವ್ಯ ಸೌಂದರ್ಯವು ಅವಳಿಂದಲೆ. ಬದುಕುಗಳ ಭವ್ಯ ಮಾಧುರ್ಯವೂ ಅವಳಿಂದಲೆ. ಪ್ರತಿ ಆಂತರ್ಯಕು ಅಕ್ಕರೆ-ಅರಿವು-ಅಂತಃಕರಣಗಳ ನಿತ್ಯ ಔದಾರ್ಯವೂ ಅವಳಿಂದಲೆ. ಅನುದಿನಕು ಅನುಕ್ಷಣಕು ಅವಳೇ ಪ್ರೇರಣೆ. ಅಡಿಗಡಿಗು ನಮ್ಮನ್ನೆಲ್ಲ ಚೈತನ್ಯದ ಸ್ವರಗಳಿಂದ ಮುನ್ನಡೆಸುತ್ತ, ಕಾರುಣ್ಯದ ಕಂಗಳಿಂದ ಕಾಪಿಡುತ್ತಿರುವ ಸ್ತೀ, ಮಾನಿನಿ, ಮಹಿಳೆ, ಹೆಣ್ಣು, ಸೀಮಂತಿನಿ, ವನಿತೆ, ಲಲನೆ, ನಾರಿ ಹೀಗೆ ಹತ್ತು ಹಲವು ನಾಮಾಂಕಿತಳಾದ ಆ ಅಪೂರ್ವ ಜೀವಚೇತನಕ್ಕೆ ಸಮರ್ಪಣೆ ನನ್ನೀ ಭಾವಪ್ರಣತೆ.”. -ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.
ಮಾನಿನಿ ಸಂಜೀವಿನಿ.!
ಸೃಷ್ಠಿಯೂ ನೀನೆ ಸಮಷ್ಠಿಯು ನೀನೆ ನಾರಿ
ಭುವಿಗೂ ಬದುಕಿಗೂ ನೀನೇ ಬೆಳಕಿನ ದಾರಿ
ನಿನ್ನಿಂದಲೇ ಮಮತೆ ವಾತ್ಸಲ್ಯದ ಸವಿಝರಿ
ನೀನೇ ಪ್ರೀತಿ ಪ್ರೇಮ ಅನುರಾಗಗಳ ಲಹರಿ.!
ಕಾಂತಿಯೂ ನೀನೆ ಶಾಂತಿಯೂ ನೀನೆ ವನಿತೆ
ಅಂದು ಇಂದು ಎಂದಿಗೂ ನೀನೆ ಜಗಪ್ರಣತೆ
ನಿನ್ನಿಂದಲೇ ಬಂಧಾನುಬಂಧಗಳ ಭಾವದೊರತೆ
ನೀನೆ ಪ್ರತಿ ಮನೆಮನದ ಚಿರಚಿರಂತನ ಹಣತೆ.!
ನಿತ್ಯಾಧಾರವೂ ನೀನೆ ಆಶ್ರಯವೂ ನೀನೆ ಹೆಣ್ಣೆ
ಅಡಿಗಡಿಗೂ ಅಕ್ಕರಾಸ್ಥೆಯಲಿ ಕಾಯುತಿಹ ಕಣ್ಣೆ
ನಿನ್ನಿಂದಲೇ ಬಾಳದೀಪಕೆ ಚೈತನ್ಯದ ಬತ್ತಿ ಎಣ್ಣೆ
ನೀನೆ ಲೋಕ ಕಾಪಿಡುತಿರುವ ಕಾರುಣ್ಯ ಕರುಣೆ.!
ಸಮಸ್ತ ಚೆಲುವು ನೀನೆ ಸರ್ವ ಬಲವು ನೀನೆ ಸ್ತ್ರೀ
ಸಕಲ ಸಾಧನೆಗು ಶೋಧನೆಗೂ ನೀನೆ ಸತ್ಯಪ್ರಹರಿ
ನಿನ್ನಿಂದಲೇ ಯಶಸ್ಸು ಶ್ರೇಯಸ್ಸುಗಳಿಗೆ ಹೆದ್ದಾರಿ
ನೀನೆ ಗೆಲುವು ಒಲವು ನಲಿವಿಗೆ ನಿತ್ಯ ರಹದಾರಿ.!
ಸ್ಫೂರ್ತಿಯು ನೀನೆ ಕೀರ್ತಿಯು ನೀನೆ ಮಾನಿನಿ
ಪ್ರತಿ ಜೀವಭಾವಗಳಿಗೆ ಪ್ರೇರಣೆಯ ಗುಪ್ತಗಾಮಿನಿ
ನಿನ್ನಿಂದಲೇ ಬೆಳದಿಂಗಳ ತಂಬೆಳಕಿನ ಯಾಮಿನಿ
ನೀನೇ ಕನಸು ಕಲ್ಪನೆಗಳ ಪುಳಕಿಪ ಸೌದಾಮಿನಿ.!
ನುಡಿಸುವಳು ನೀನೆ ನಡೆಸುವಳು ನೀನೆ ಮಹಿಳೆ
ಯುಗಯುಗದಿ ಜಗಕೆ ನೀನೆ ಗಾರುಡಿಯ ಕಹಳೆ
ನಿನ್ನಿಂದಲೇ ಚಂದನದ ನಂದನವಾಗಿದೆ ಈ ಇಳೆ
ನೀನೇ ನಗೆ ನಲಿವುಗಳ ಅಕ್ಷಯವಾಗಿಸುವ ತರಳೆ.!
ವ್ಯಾಪ್ತಿಯೂ ನೀನೆ ದೀಪ್ತಿಯೂ ನೀನೆ ಲಲನೆ
ಅರಿವು ಪರಿವು ಹರಿವುಗಳಿಗೆಲ್ಲಕು ನೀನೆ ಚಾಲನೆ
ನಿನ್ನಿಂದಲೇ ಜೀವ ಜೀವನಗಳ ಲಾಲನೆ ಪಾಲನೆ
ನೀನೇ ತಪಸ್ಸು ತೇಜಸ್ಸು ವರ್ಚಸ್ಸಿಗೆ ಸಂಚಲನೆ.!

-ಎ.ಎನ್.ರಮೇಶ್, ಗುಬ್ಬಿ
