ಅನುದಿನ ಕವನ-೧೮೯೫, ಕವಯತ್ರಿ: ವೇದಾರಾಣಿ ದಾಸನೂರ, ಹುಬ್ಬಳ್ಳಿ, ಕವನದ ಶೀರ್ಷಿಕೆ: ಸೀರೆಯೆಂದರೆ…..

[ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳೊಂದಿಗೆ]

ಸೀರೆಯೆಂದರೆ….

ಸೀರೆಯೆಂದರೆ ಸಹನೆ
ಅದು ಪ್ಯಾಂಟಿನಂತಲ್ಲದೆ
ವ್ಯಕ್ತಿಗತ ಅಳತೆಗೆ ನುಣುಚಿಕೊಳ್ಳದೆ
ಅಹಂಕಾರ ಬೇಡದ ವಿಶಾಲ ಭೂಮಿ.
ಬಳಸಿಕೊಂಡವರ ಭಾವಕೆ
ಅವರವರದೇ ಅಂತರಾಳಕೆ
ಇರುವಲ್ಲಿ , ಹೋಗುವಲ್ಲಿ
ಹೊಂದಿಕೊಳ್ಳುವ ಸೀರೆ
ಸಂಕೇತ ಸಮಾಧಾನಕೆ.

ಸೀರೆಯೆಂದರೆ ಸಂಸ್ಕಾರ
ಹಸೆಗೆ ಹೋಗುವ ಮೊದಲೇ
ತಾಲೀಮು ಶುರುವಾಗುವುದದಕೆ
ಯಾವ ನೆರಿಗೆಗೂ ಅಪಚಾರವಾಗದೆ
ಅಸಮವಾಗಿ ಹೊಂದಿಸದೆ
ಸರಕ್ಕೆಂದು ಜಾರಿಸದೆ
ಅಲ್ಲಲ್ಲಿ ಬಂಧಿಸಬೇಕು
ಎಲ್ಲ ಮುದುಡಿದ ಭಾವಗಳ
ನೀರಿಗೆಗಳಲ್ಲೇ ಮುಚ್ಚಿಹಾಕಿ
ಹೊರಗೆ ನೋಟಕಿಡಬೇಕು
ದಟ್ಟದಡೆ, ಸೆರಗನು.

ಸೀರೆಯೆಂದರೆ ಸಹಕಾರ
ಕಾಲಮಾನಕೆ ಕಾಲ್ಕುಣಿಸಿ
ಕತ್ತು ಬಗ್ಗಿಸಿಯೇ ಇರುವ ಸೀರೆ,
ಬಿಡುವು ಬೇಡದ ಬೆಡಗಿ
ನಿರ್ಲಕ್ಷಕೆ ನೇತುಬೀಳದೆ
ಮುದುಡಿಕೊಳ್ಳುವುದು
ಮಡಚಿಕೊಂಡು ಮೂಲೆಯೊಳಗೆ.

ಸೀರೆಯೆಂದರೆ ಸೋಗಾಗುವ
ಸಮಾರಂಭದ ಜರಿಸೀರೆಗಿಲ್ಲ
ದಿನವೂ ದುಡಿವ ಹಾಡು
ಕೊಳಕಾಗುವ ಪಾಡು.

ಸೀರೆಯೆಂದರೆ ‘ಕಟ್ಟುವಿಕೆ’
ನಸಿದು, ಪಿಸಿದು, ಕುಸಿದರೂ
ಲ್ಯಾವಿಗಂಟಿಗೆ ಹೊದಿಕೆಯಾಗಿ
ಬೆಚ್ಚನೆ ಕೌದಿಗೆ ಕಳೆಯಾಗಿ
ಉಳಿಯುವುದು ಅದೇ ಸೀರೆ.

ಸೀರೆಯೆಂದರೆ………….. ಸೀರೆಯೇ……….

-ವೇದಾರಾಣಿ ದಾಸನೂರ, ಹುಬ್ಬಳ್ಳಿ

Leave a Reply

Your email address will not be published. Required fields are marked *