ಅನುದಿನ ಕವನ-೧೮೯೬, ಕವಿ: ಸಿದ್ದು ಜನ್ನೂರು, ಚಾಮರಾಜನಗರ

ಬುದ್ಧನಾಗಬೇಕಿಲ್ಲ…!

ನೀನು ಬುದ್ಧನಾಗಬೇಕಿಲ್ಲ
ಅವನ ಹಾದಿ ಹಿಡಿದರೆ ಸಾಕಿತ್ತು
ನೀನು ಯುದ್ಧ ಬಿಟ್ಟು
ಶಾಂತಿಪ್ರಿಯ ಅಶೋಕನಂತಾಗುತ್ತಿದ್ದೆ…

ಯುದ್ಧವೆಂದರೆ ಅಶೋಕ
ರಕ್ತದ ಕೋಡಿಯನ್ನೆ ಹರಿಸಿದ ಶೂರ
ಕೊನೆಗೆ ಆ ಸಾವು-ನೋವು
ಕೈ ಇಲ್ಲದ ಕಾಲಿಲ್ಲದ ಸೈನಿಕರ
ಗೋಳಾಟ ಚೀರಾಟ ಸಂಕಟ
ಎಲ್ಲಾವನ್ನು ಕಣ್ಣೆದುರೆ ನೋಡಿ
ತಾನು ಬುದ್ಧನಿಗೆ ಶರಣಾಗಿ ಹೋದ
ನೀವೇನು ಮಹಾ ಇನ್ನೂ ಶರಣಾಗಿ ಬಿಡಿ ಬುದ್ಧನಿಗೆ…

ಹೃದಯವಿದ್ದರೆ ಸಾಲದು
ತಾಯ್ತನದ ಕರುಣೆ ಇರಬೇಕು
ಅದಕ್ಕಲ್ಲವೆ ಬುದ್ಧ
ಯುದ್ಧಬೇಡವೆಂದ ತನ್ನ ತಾ ಗೆದ್ದ
ಅದಕ್ಕಲ್ಲವೆ ಅಶೋಕ
ಯುದ್ಧ ತ್ಯಜಿಸಿದ
ಬುದ್ಧನ ಹಾದಿ ಹಿಡಿದ
ಹಿಂಸೆಗೆ ನಲುಗಬಾರದು ಮಕ್ಕಳು ಮರಿಗಳು
ಮತ್ತು ಜನಗಳು
ಪ್ರೀತಿಗೆ ಕೊಂಚ ಜಾಗ ಕೊಡಿ
ಅದಕ್ಕೆ ನೀ ಬುದ್ಧನೇ ಆಗಬೇಕಿಲ್ಲ
ಮನುಷ್ಯತ್ವದ ಅಶೋಕನಾದರೂ ಸಾಕು…


-ಸಿದ್ದು ಜನ್ನೂರ್, ಚಾಮರಾಜನಗರ
—–

Leave a Reply

Your email address will not be published. Required fields are marked *