ಅನುದಿನ ಕವನ-೧೯೦೦, ಕವಯತ್ರಿ: ಡಾ. ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ, ಕವನದ ಶೀರ್ಷಿಕೆ: ನೆನಪುಗಳ ಒಲುಮೆ

ನೆನಪುಗಳ ಒಲುಮೆ

ಅರುಚಾಟ ಕಿರುಚಾಟಕೆ
ಸೆಡುವಾಗಿದೆ ಮೌನದ ನೆನಪ ಒಲುಮೆ
ಇದು ಸಿರಿಯ ಸ್ವತ್ತಲ್ಲ
ಇದಕೆ ತಂಗಾಳಿಯ ಹಸಿರು ನೆಲ
ಕೈ ಬೀಸಿ ಕರೆಯುತ್ತಿದೆ. .

ಆದರೂ ಜಾಡಿರದ
ಪ್ರೀತಿ ಒಲುಮೆಗೆ
ಕಬ್ಬಿಣದ ಕುಲುಮೆ ಬಗ್ಗು ಬಡಿಯುತ್ತಿದೆ

ಬ್ಯಾಸರದ ಉಸಿರು ನಗೆ ಹನಿಯೊಳು
ಕೆರೆಯ ತುದಿಯ ಅಲೆಯ ಗಮನಿಸುತ
ಗಟ್ಟಿಗೊಂಡಿದೆ. .

ಯಾರ ಹಂಗು ಇದಕೆ ಇಲ್ಲ
ಮರದ ಮರೆಯ ಪೊಟರೆಯ ಚಿತ್ರ
ನೆನಪ ಆ ದಿನದ ಸವಿಯುತ
ಮೆಲ್ಲುಸಿರಲಿ ನಗುತಿದೆ. .

ಇದೇ ಅಲ್ಲವೇ ಎತ್ತ ಸುಳಿದರೂ
ಬೆಂಬಿಡದ ಸವಿಯೂಟದ ನೆನಪು
ಭಾವನೆಗಳಿಗೂ ನಿಲುಕದ
ಮನಸು ಕನಸುಗಳ ಏರಿಳಿತ. .

ಅದರ ಶಕ್ತಿ ಗೆ ನಿಜಕ್ಕೂ ಸಲಾಂ
ನೆನಪುಗಳ ಹರಿಗೋಲಿಗೆ
ನೆನಪೇ ತಿರುವುತ್ತಿರುವ ಕೈಯ್ಯ ಚಾಪು
ಹೇಗಿದೆಯಲ್ಲ ನೆನಪ ಕನ್ನಡಿ. .

ತಳ್ಳಿದಷ್ಟು ದೂರ ನೆನಪುಗಳ ಭಾರ
ಕೊನೆಗೂ ಸಿಗಲಾರದಷ್ಟು ಚೌಕಟ್ಟು
ಇದಕೆ ಅಂತ್ಯ ಎಲ್ಲಿ. .

ಮರೆತರೂ ಮತ್ತೆ ಮತ್ತೆ ಮೆಲಕು
ಹಾಕುವ ಮರ್ಕಟದ ಮನಕೆ ಮನದ ಬಿಂಬ ಚಿತ್ತಾರದ ರಂಗೋಲಿಯಲಿ
ಬೆಂದರೂ ಕೊನೆಯಿಲ್ಲ. .

ಏನ ಹೇಳಲಿ ನೆನಪುಗಳ ಆಗರ?
ಬುತ್ತಿ ಬಿಚ್ಚಿದಷ್ಟು ರುಚಿಎಂಬ
ನೆನಪಾಧಾರ. .

ಬಿಗಿದಬ್ಬರಿಸಿ ಬೊಬ್ಬೆ ಹಾಕಿದ
ಮನದ ಕಡಿವಾಣಕೆ ಪ್ರೀತಿಯ
ನೆನಪು ಚೈತನ್ಯ ತಂದಿದೆ. .

ಇದಕೆ ವಯಸ್ಸೆಂಬ ಆಯಸ್ಸು ಕೂಡಾ
ಹಿಂದೆ ಸರಿದಿದೆ
ಇದಕೆ ಲಿಂಗ ಬೇಧವಿಲ್ಲ
ಪತದಷ್ಟು ಎತ್ತರ ಹಾರುವ ಶಕ್ತಿ. .

ಏನ ಬಣ್ಣಿಸಲಿ ನೆನಪುಗಳ
ಬಣ್ಣಚಾಪಿಗೆ
ಅಂತಸ್ತುಗಳ ನೆಲೆಯಿಲ್ಲ
ಆದರೂ ನೆನಪು ಒಮ್ಮೊಮ್ಮೆ
ನೆಪಗಳಿಲ್ಲದೆ ನೆನಪದೋಕುಳಿಯಲಿ
ತೇಲಿಸುವುದು. .

ನೆನಪ ಮಧುರ ಆಹಲಾದಕೆ
ಈ ಜಗದ ವಿಶ್ವಪಥ ಶ್ರಮ ಕೊಟ್ಟು
ಪ್ರೀತಿಯ ನೆನಪಿನತ್ತ ಇಂದಿಗೂ
ಅಜರಾಮರ ..

ನೆನಪುಗಳ ಕರೆಯೋಲೆಗೆ
ಎಡ ಬಲ ನೀರ ಹರಿವು
ಸ್ದದಾಗುತ ಖುಷಿಯೊಳು
ಜಾರುತ್ತಿದೆ ಆಳವಿಲ್ಲದ ಅಂತ್ಯಕೆ. .

ಇದಕೆ ನೆನಪ ದೇಹ
ಕುಪ್ಪಳಿಸಿ ಕುಣಿಯುತಿದೆ
ಒಲುಮೆಯ ಹಸಿವು
ಈ ನೆನಪಿಗೆ ಪನ್ನೀರ ಬಿಂದು
ಹಾಕುತಿದೆ
ಇದೇ ನೆನಪ ಭಾವುಕತೆಯ
ಮೆಲುಕು. ..


-ಡಾ.ಕೃಷ್ಣವೇಣಿ ಆರ್ ಗೌಡ, ಹೊಸಪೇಟೆ