ಅನುದಿನ ಕವನ-೧೯೨೩, ಕವಿ: ಚಿದಂಬರ ನರೇಂದ್ರ, ಬೆಂಗಳೂರು

ಸೈಡ್ ಮಿರರ್ ಲ್ಲಿ
ಯಾರೂ ಕಾಣಿಸುತ್ತಿಲ್ಲವಾದರೂ
ಒಮ್ಮೆ ಹೊರಳಿ ನೋಡಿಯೇ
ತನ್ನ ಸ್ಕೂಟರ್
ಸ್ಟಾರ್ಟ್ ಮಾಡುತ್ತಾಳೆ.

ರಭಸದಿಂದ ಓಡುತ್ತಿರುವ ಕಾರು
ಹತ್ತಿರವಾಗುತ್ತಿರುವಾಗಲೆ
ಅಡ್ಡ ಬರುವ ಹುಂಬ ಬೆಕ್ಕಿನಂತೆ,
ಅವಸರ ಮಾಡಿಕೊಳ್ಳದೇ
ದಾಟುವುದೇ ಇಲ್ಲ ಅವಳು
ಯಾವತ್ತೂ ಏನನ್ನೂ.

ದಾರಿಯಲ್ಲಿ ಯಾರಾದರೂ
ವಿಳಾಸ ಕೇಳಿದರೆ ಬ್ಲಾಂಕ್ ಆಗುತ್ತಾಳೆ
ಎಡ, ಬಲ ಗೊತ್ತಾಗದೇ ತಡವರಿಸುತ್ತಾಳೆ.

ಸುಳ್ಳು ಹೇಳುತ್ತಾಳೆ ಸರಾಗವಾಗಿ
ಪ್ರೀತಿಯ ಸಲಿಗೆಯಲ್ಲಿ,
ಸತ್ಯ ಕೂಡ ಮುಟ್ಟಿ ನೋಡಿಕೊಳ್ಳುವಂತೆ
ಬಿಚ್ಚಿಡುತ್ತಾಳೆ
ಸತ್ಯವಂತರ ಭ್ರಮೆಗಳನ್ನ ವಾದದಲ್ಲಿ.

ಅವಳ ನಖರಾಗಳನ್ನೆಲ್ಲ
ಪಟ್ಟಿ ಮಾಡಿ
ಡೈರಿಯಲ್ಲಿ ಬರೆದಿಡುತ್ತ ಹೋದೆ.
ಒಂದು ಚಂದ್ರನಿರದ ರಾತ್ರಿ
ದೀಪಕ್ಕಾಗಿ ತಡಕಾಡುತ್ತಿದ್ದ ಕೈಗಳಿಗೆ
ಝಗ್ ಎಂದು ಹೊತ್ತಿಕೊಂಡವು
ಡೈರಿಯ ಪುಟಗಳು ;

ಬಿಚ್ಚಿ ಓದುತ್ತಿದ್ದರೆ, ಯಾಕೋ
ಅಟೊಬಯಾಗ್ರಾಫಿಕಲ್ ಅನಿಸುತ್ತಿದೆ
ನನ್ನ ಈ ಬರವಣಿಗೆ.


-ಚಿದಂಬರ ನರೇಂದ್ರ, ಬೆಂಗಳೂರು
—–

Leave a Reply

Your email address will not be published. Required fields are marked *