
ಬಳ್ಳಾರಿ: ನಗರದ ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಂಗಳವಾರ ವಿಶ್ವಜ್ಞಾನಿ ಡಾ. ಬಿ. ಆರ್. ಅಂಬೇಡ್ಕರ್ ಅವರ 135ನೇ ಜಯಂತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ತಾಜುದ್ದೀನ್ ಪಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಂಬೇಡ್ಕರ್ ಅವರು ಭಾರತೀಯ ಸಂವಿಧಾನವನ್ನು ರಚಿಸದೆ ಹೋಗಿದ್ದರೆ, ಇಂದಿನ ಸಮಾಜದ ಸ್ಥಿತಿ ಹೇಗಿರುತ್ತಿತ್ತೋ ಎಂಬ ಆತಂಕವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಅಶ್ವ ರಾಮು ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಆಶಯಗಳ ಪ್ರಸ್ತುತತೆಯನ್ನು ಹೃದಯಸ್ಪರ್ಶಿಯಾಗಿ ವಿವರಿಸಿದರು. ಬಾಬಾಸಾಹೇಬ ಅಂಬೇಡ್ಕರ್ ಅವರು ಕನಸು ಕಂಡ ಸಮಾನತೆಯ ಸಮಾಜ ಇನ್ನೂ ಸಂಪೂರ್ಣವಾಗಿ ನಿರ್ಮಾಣವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಜಾತಿ, ವರ್ಗ ಮತ್ತು ಲಿಂಗ ಅಸಮಾನತೆಗಳು ಇಂದಿಗೂ ಸಮಾಜದಲ್ಲಿ ಹಾಸುಹೊಕ್ಕಾಗಿರುವುದನ್ನು ಉಲ್ಲೇಖಿಸಿ, ಅವುಗಳನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ಯುವಜನತೆಯ ಮೇಲಿದೆ ಎಂದು ಹೇಳಿದರು.

“ಶಿಕ್ಷಣವೇ ವ್ಯಕ್ತಿಯ ನಿಜವಾದ ಶಕ್ತಿ” ಎಂದು ಒತ್ತಿ ಹೇಳಿದ ಅವರು, ಅಂಬೇಡ್ಕರ್ ಅವರು “ಶಿಕ್ಷಣ, ಸಂಘಟನೆ, ಮತ್ತು ಹೋರಾಟ” ಎಂಬ ಮಂತ್ರದ ಸಂದೇಶವನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನೂ ಅವರು ಸಂವಿಧಾನದ ಮಹತ್ವವನ್ನು ವಿವರಿಸಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ತಿಳಿಸಿದರು. ಅಂಬೇಡ್ಕರ್ ಅವರ ಚಿಂತನೆಗಳು ಕೇವಲ ಪುಸ್ತಕಗಳಲ್ಲಿ ಉಳಿಯದೆ, ನಮ್ಮ ದಿನನಿತ್ಯದ ಬದುಕಿನಲ್ಲಿ ಪ್ರತಿಫಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಾದ ಎಚ್.ಎಂ. ಗಂಗಮ್ಮ, ವೀರೇಶ, ಗಂಗಾಧರ ಹಾಗೂ ತ್ರಿವೇದಿ ಅವರು ಅಂಬೇಡ್ಕರ್ ಅವರ ಜೀವನ ಮತ್ತು ಆದರ್ಶಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಉಪನ್ಯಾಸಕಿಯರಾದ ಗೌಸಿಯ ಬೇಗಂ, ಶಿವಗಂಗಾ ಮತ್ತು ನಾಗವೇಣಿ ಅವರು ಅಂಬೇಡ್ಕರ್ ಅವರ ಬದುಕು ಮತ್ತು ಸಾಧನೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ಗೀತಾ ಅವರು ಪ್ರಾರ್ಥಿಸಿದರು. ಬಸವರಾಜ್ ಪಿ.ಎಂ. ಸ್ವಾಗತಿಸಿದರು. ಬೋಧಕ ರಾಮಕೃಷ್ಣಾರೆಡ್ಡಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಆನಂದ ವಂದಿಸಿದರು. ಪ್ರಶಿಕ್ಷಣಾರ್ಥಿ ಸಿದ್ದರೂಡ ಅವರು ನಿರೂಪಿಸಿದರು.ಸಹಾಯಕ ಪ್ರಾಧ್ಯಾಪಕ ಅಂಥೋನಿ ಮತ್ತು ಆಲಂಬಾಷಾ ಅವರು ನಿರ್ವಹಿಸಿದರು.
