ಕಂಪ್ಲಿಯಲ್ಲಿ ಪತ್ರಿಕಾ ದಿನಾಚರಣೆ:  ಮೊಬೈಲ್ ಹಾವಳಿಯಿಂದ ವಿದ್ಯಾರ್ಥಿಗಳಲ್ಲಿ ಓದು ಕ್ಷೀಣ -ಯಾಳ್ಪಿ ವಲಿಭಾಷ

ಕಂಪ್ಲಿ, ಜು,23:ಇಂದಿನ ಆಧುನಿಕ ಕಾಲದಲ್ಲಿ ಮೊಬೈಲ್‌ ಹಾವಳಿಯಿಂದ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗಿದೆ. ಮೊಬೈಲ್‌ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವ ವಿದ್ಯಾರ್ಥಿಗಳು, ತಮ್ಮ ಜೀವನವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಅವರು ಹೇಳಿದರು.

ಪಟ್ಟಣದ ಷಾಮಿಯಾಚಂದ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅಂದಾಗ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಬಹುದು. ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಗುರಿಯನ್ನು ಹೊಂದುವ ಸಂಕಲ್ಪ ಮಾಡಬೇಕು ಎಂದರು.

ಸಮಾಜ ಹಾಗೂ ದೇಶದ ಬಗ್ಗೆ ಕಾಳಜಿ ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕಾದರೆ, ಉತ್ತಮ ಚಿಂತನೆ ಮತ್ತು ವಿವೇಚನಾ ಶಕ್ತಿ ಅಗತ್ಯ. ಪ್ರತಿಯೊಂದು ವಿಷಯವನ್ನೂ ಮೌಲ್ಯಮಾಪನ ಮಾಡುವ ಗುಣವನ್ನು ವಿದ್ಯಾರ್ಥಿ ಜೀವನದಲ್ಲೇ ರೂಢಿಸಿಕೊಳ್ಳಬೇಕು ಅಲ್ಲದೇ, ಪತ್ರಿಕೆಗಳನ್ನು ಹೆಚ್ಚೆಚ್ಚು ಓದುವ ಹವ್ಯಾಸವನ್ನು ವಿಧ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.

ಜನಪ್ರತಿನಿಧಿಗಳ ಮಾತುಗಳು ವೇದಿಕೆಗೆ ಸೀಮಿತವಾಗಿ ಅದು ಕಾರ್ಯರೂಪಕ್ಕೆ ಬಾರದಿದ್ದಾಗ ಅದನ್ನು ನೆನಪು ಮಾಡುವ ಕಾರ್ಯವನ್ನು ಪತ್ರಕರ್ತರು ಮಾಡುವ ಮೂಲಕ ಅಂಕುಶವಾಗಿ ಕೆಲಸ ಮಾಡುತ್ತಾರೆ. ತಪ್ಪು-ಸರಿಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಅತಿ ಅಗತ್ಯವಾಗಿದೆ ಎಂದರು.

ಪತ್ರಿಕೋದ್ಯಮದಲ್ಲಿ ಎಐ ಬಳಕೆ ಹೆಚ್ಚು ಪರಿಣಾಮಕಾರಿಯಾಗಲಿದ್ದು ಅದರ ಟೂಲ್ ಗಳನ್ನು ಬಳಸಿಕೊಂಡು ಲೇಖನಗಳನ್ನು ಹೆಚ್ಚು ಸ್ಪಷ್ಟಗೊಳಿಸುವ ಜತೆಗೆ ತಪ್ಪುಗಳನ್ನು ದೂರ ಮಾಡಬಹುದು. ನಮ್ಮ ಅನುಭವ, ಸೃಜನಶೀಲತೆಗಳ ಮೂಲಕ ಲೇಖನಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಬಹುದು ಎಂದು ಅಭಿಪ್ರಾಯ ಪಟ್ಟರು.

ಕರ್ನಾಟಕ ಪತ್ರಕರ್ತರ ಸಂಘದ ಕಂಪ್ಲಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಹೆಚ್.ಮರಿಯಪ್ಪ ನಿರೂಪಿಸಿದರು. ಪ್ರಾಸ್ತಾವಿಕವಾಗಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಡಾ.ಗಿರೀಶ್ ಕುಮಾರ್ ಗೌಡ ರವರು ಮಾತನಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೆ.ಬಜಾರಪ್ಪ, ಕುರುಗೋಡು ವೀರಭಧ್ರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರ್ಗೇಶ್ ಯಾದವ್, ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಹೊಸಕೋಟೆ ಜಗದೀಶ್, ಕಾಲೇಜಿನ ಪ್ರಾಂಶುಪಾಲರಾದ ಸಿದ್ದಣ್ಣ ಪರಮೇಶ್ವರ, ತಾಲೂಕ ಪಂಚಾಯತ್ ಇಓ ಆರ್.ಕೆ.ಶ್ರೀಕುಮಾರ್, ದಲಿತ ಮುಖಂಡ ಕೆ.ಲಕ್ಷ್ಮಣ, ಹಿರಿಯ ಪತ್ರಕರ್ತರಾದ ಭಾವೈಕ್ಯ ವೆಂಕಟೇಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *