ಬೆಳಗಾವಿಯ ಹಿರಿಯ ಕವಿ ಸಾಹಿತಿ ವಿದ್ವಾಂಸ ಪತ್ರಕರ್ತರಾದ ಡಾ. ಸರಜೂ ಕಾಟ್ಕರ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಕನ್ನಡ ಸಾಹಿತ್ಯ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ನೃಪತುಂಗ ಪ್ರಶಸ್ತಿ ದೊರೆತಿರುವುದು ಅತ್ಯಂತ ಅಭಿಮಾನ ಪಡುವ ಸಂಗತಿಯಾಗಿದೆ.
ಹುಬ್ಬಳ್ಳಿಯಲ್ಲಿ 14 ಆಗಸ್ಟ್ 1953ರಂದು ಜನಿಸಿದ ಡಾ. ಸರಜೂ ಕಾಟ್ಕರ್ ಅವರು ಡಾ. ಗುರುಲಿಂಗ ಕಾಪಸೆ ಅವರ ಮಾರ್ಗದರ್ಶನದಲ್ಲಿ ‘ಮರಾಠಿ ದಲಿತ ಸಾಹಿತ್ಯ’ ಎಂಬ ವಿಷಯ ಕುರಿತು ಸಂಶೋಧನೆ ಮಾಡಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದವರು. ತದನಂತರ ಪಾಟೀಲ ಪುಟ್ಟಪ್ಪ, ಖಾದ್ರಿ ಶಾಮಣ್ಣ ಅವರಂತಹ ಧೀಮಂತ ಪತ್ರಕರ್ತರ ಪ್ರಭಾವದಿಂದ ಪತ್ರಿಕಾ ಕ್ಷೇತ್ರಕ್ಕೆ ಕಾಲಿಟ್ಟರು. ಪ್ರಾರಂಭದಲ್ಲಿ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ ತರುವಾಯ ಕನ್ನಡಪ್ರಭ ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದರು. ತಮ್ಮ ಮೊನಚಾದ ವರದಿಗಳಿಂದ ಕರ್ನಾಟಕ ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲಿ ಸಂಚಲನವನ್ನುಂಟು ಮಾಡಿದವರು. ಒಂದು ವರದಿಯ ಪರಿಣಾಮವಾಗಿ ಒಬ್ಬ ಪ್ರತಿಷ್ಠಿತ ಮಂತ್ರಿ ರಾಜಕೀಯವಾಗಿ ಸಂಪೂರ್ಣ ಹಿನ್ನಲೆಗೆ ಸರಿಯುವಂತಾಯಿತು. ಮಾನವೀಯ ಸಂವೇದನೆಯುಳ್ಳ ಡಾ. ಕಾಟ್ಕರ್ ಅವರ ವರದಿಗಳು ಬಡವರಿಗೆ ಶೋಷಿತರಿಗೆ ಆಶಾಕಿರಣಗಳಾಗಿವೆ. ಅವರು ಯಾವಾಗಲೂ ಬಡವರ ಪರವಾಗಿ ಇರುವಂತವರು. ಶೋಷಿತರ ಪರವಾಗಿ ಇರುವಂತವರು.
ಅವರೊಂದಿಗಿನ ನನ್ನ ಒಡನಾಟ ಎರಡು ದಶಕಗಳಿಂದಲೂ ಇದೆ. ಅವರ ಒಡನಾಟದಲ್ಲಿ ನಾನು ಸಾಹಿತ್ಯಲೋಕದಲ್ಲಿ ಹೆಚ್ಚು ಕೃಷಿ ಮಾಡಿದೆ. ಅವರು ನೀಡಿದ ಪ್ರೇರಣೆ ಪ್ರೋತ್ಸಾಹಗಳಿಂದ ನನ್ನ ಸಾಹಿತ್ಯಿಕ ಶ್ರೇಯೋಭಿವೃದ್ಧಿಯಾಯಿತು. ೨೦೧೧ರಲ್ಲಿ ವಿಶ್ವಕನ್ನಡ ಸಮ್ಮೇಳನ ಬೆಳಗಾವಿಯಲ್ಲಿ ಅತ್ಯಂತ ಅದ್ದೂರಿಯಾಗಿ ಜರುಗಿತು. ನೂರಾರು ಕೋಟಿ ಹಣ ಖರ್ಚಾಯಿತು. ಆದರೆ ಆ ಸಮ್ಮೇಳನದ ಸವಿನೆನಪಿಗಾಗಿ ಡಾ. ಸರಜೂ ಕಾಟ್ಕರ್ ಅವರು ‘ಬೆಳಗಾವಿ ಸಂಸ್ಕೃತಿ’ ಎಂಬ ಅಪರೂಪದ ಸಂಪುಟವನ್ನು ಸಂಪಾದಿಸಿದರು. ಅದನ್ನು ನಾನು ನನ್ನ ಬೆಳದಿಂಗಳು ಪ್ರಕಾಶನದ ಮೂಲಕ ಪ್ರಕಟಿಸಿದೆ. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ವಿಶ್ವಸುಂದರಿ ಐಶ್ವರ್ಯ ರೈ, ನಾರಾಯಣ ಮೂರ್ತಿ, ಯಡಿಯೂರಪ್ಪ ಮೊದಲಾದ ಹಿರಿಯರು ಈ ಸಂಪುಟವನ್ನು ವಿಶ್ವಕನ್ನಡ ಸಮ್ಮೇಳನದ ಉದ್ಘಾಟನೆ ಕಾಲಕ್ಕೆ ಲೋಕಾರ್ಪಣೆ ಮಾಡಿದ್ದು ನನ್ನ ಜೀವನದ ಒಂದು ಅವಿಸ್ಮರಣೀಯ ಘಟನೆಯಾಗಿದೆ.
೨೦೦೯ರಲ್ಲಿ ನನಗೆ ಮಗಳು ಜನಿಸಿದಳು. ಸರಜೂ ಕಾಟ್ಕರ್ ಸರ್ ಅವಳನ್ನು ನೋಡಿ, ‘ಇವಳು ಇಂದು ಪೂರ್ಣಿಮೆ ದಿನ ಹುಟ್ಟಿದ್ದಾಳೆ. ನಿನ್ನ ಬಾಳಿನಲ್ಲಿ ಯಾವಾಗಲೂ ಬೆಳದಿಂಗಳು ಮೂಡುತ್ತದೆ’ ಎಂದು ಹಾರೈಸಿದ್ದರು. ಅವರ ಮಾತಿನ ಧಾರೆ ಹಿಡಿದು, ನನ್ನ ಮಗಳಿಗೆ ‘ಪೂರ್ಣಿಮಾ’ ಎಂದು ಹೆಸರಿಟ್ಟೆ. ಎಲ್ಲರೂ ಜ್ಯೋತಿಷಿಗಳನ್ನು ಕೇಳಿ ಮಕ್ಕಳ ಹೆಸರನ್ನು ಇಡುತ್ತಾರೆ. ಆದರೆ ನಾನು ಸರಜೂ ಕಾಟ್ಕರ್ ಅವರು ಹೇಳಿದ ಆ ಮಾತಿನಿಂದ ಪ್ರೇರಿತನಾಗಿ ‘ಪೂರ್ಣಿಮಾ’ ಎಂದು ಹೆಸರಿಟ್ಟೆ. ಅವಳ ಹೆಸರಿನಲ್ಲಿ ‘ಬೆಳದಿಂಗಳು ಪ್ರಕಾಶನ’ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿದೆ. ಈ ಪ್ರಕಾಶನದಿಂದ ಡಾ. ಸರಜೂ ಕಾಟ್ಕರ್ ಅವರು ಸಂಪಾದಿಸಿದ ‘ಕರ್ನಾಟಕ ಸಂಸ್ಕೃತಿ’ ಎಂಬ ಅಪರೂಪದ ಗ್ರಂಥವನ್ನು ಮೊಟ್ಟಮೊದಲ ಕೃತಿಯಾಗಿ ಪ್ರಕಟಿಸಿದೆ. ಈ ಕೃತಿಯನ್ನು ಸಾಹಿತ್ಯಲೋಕದ ಧೀಮಂತರಾದ ಡಾ. ಬರಗೂರು ರಾಮಚಂದ್ರಪ್ಪ ಅವರು ಬೆಳಗಾವಿಯಲ್ಲಿ ಲೋಕಾರ್ಪಣೆ ಮಾಡಿದರು. ಅದು ಎಷ್ಟು ಜನಪ್ರಿಯವಾಯಿತ್ತೆಂದರೆ, ಕೆಲವೇ ದಿನಗಳಲ್ಲಿ ಸಾವಿರ ಪ್ರತಿಗಳು ಮಾರಾಟವಾಗಿ ಹೋದವು. ತದನಂತರ ‘ಬೆಳಗಾವಿ ಸಂಸ್ಕೃತಿ’ ಪ್ರಕಟಿಸಿದೆ. ಇದೇ ಸಂದರ್ಭದಲ್ಲಿ ಬೆಳಗಾವಿ ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ಧ ಸ್ವಾಮೀಜಿಯವರು ಡಾ. ಸರಜೂ ಕಾಟ್ಕರ್ ಅವರ ಒಂದು ಕೃತಿಯನ್ನು ಪ್ರಕಟಿಸಲು ಬಯಸಿದರು. ಆಗ ನಾನೇ ಅಕ್ಷರ ಸಂಯೋಜನೆ ಮಾಡಿ ಸರಜೂ ಕಾಟ್ಕರ್ ಅವರ ‘ಶರಣ ಸಂಸ್ಕೃತಿ’ ಎಂಬ ಕೃತಿಯನ್ನು ಪ್ರಕಟಿಸಲಾಯಿತು. ಹೀಗೆ ನಾನು ಡಾ. ಸರಜೂ ಸರ್ ಅವರ ‘ಕರ್ನಾಟಕ ಸಂಸ್ಕೃತಿ’, ‘ಬೆಳಗಾವಿ ಸಂಸ್ಕೃತಿ’, ಶರಣ ಸಂಸ್ಕೃತಿ’ ಹೀಗೆ ಮೂರು ಸಂಸ್ಕೃತಿ ಕಥನಕೃತಿಗಳು ಬೆಳಕು ಕಾಣಲು ಕಾರಣನಾದೆ. ಅವರು ಕೆಲವು ಅಪರೂಪದ ವ್ಯಕ್ತಿಚಿತ್ರಣಗಳನ್ನು ಬರೆದಿದ್ದರು. ಅವುಗಳ ಸಂಕಲನ ‘ಗುರುತಿನ ಮುಖಗಳು’ ಎಂಬ ಹೆಸರಿನಲ್ಲಿ ಬೆಳದಿಂಗಳು ಪ್ರಕಾಶನದಿಂದ ಪ್ರಕಟಿಸಿದೆ. ಅವರು ತಮ್ಮ ಪತ್ರಿಕಾ ಕ್ಷೇತ್ರದ ಕೆಲವು ಅಪರೂಪದ ಘಟನೆಗಳನ್ನು ಆಧರಿಸಿ ಕಥೆಗಳನ್ನು ಬರೆದಿದ್ದರು. ಅವುಗಳನ್ನು ‘ಹೇಳಲಾಗದ ಕಥೆಗಳು’ ಎಂಬ ಹೆಸರಿನಲ್ಲಿ ಪ್ರಕಟಿಸಿದೆ. ಅದು ಕೂಡ ತುಂಬ ಜನಪ್ರಿಯವಾಯಿತು.
೨೦೧೭ರಲ್ಲಿ ನಾನು ತುಂಬ ವಿಷಾದಯೋಗದಲ್ಲಿದೆ. ಆಗ ಆ ನೋವಿನಿಂದ ಹೊರಬರಲು ಏನಾದರೂ ಮಾಡಬೇಕೆಂದು ಆಲೋಚಿಸುತ್ತಿದ್ದೆ. ಆಗ ಲಿಂಗಾಯತ ಸ್ವತಂತ್ರಧರ್ಮ ಹೋರಾಟ ನಡೆದಿತ್ತು. ಇದೇ ಕಾಲಕ್ಕೆ ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರಿಗೆ ೭೦ ವರುಷಗಳು ತುಂಬುತ್ತಿದ್ದವು. ಆಗ ಪೂಜ್ಯರಿಗೆ ‘ಲಿಂಗಾಯತ ಸಂಸ್ಕೃತಿ’ ಎಂಬ ಅಪರೂಪದ ಅಭಿನಂದನ ಸಂಪುಟವನ್ನು ಅರ್ಪಿಸಬೇಕೆಂದು ಕಾರ್ಯತತ್ಪರನಾದೆ. ಆಗ ಈ ಸಂಪುಟದ ಪ್ರಧಾನ ಸಂಪಾದಕರಾಗಿ ನನಗೆ ಮಾರ್ಗದರ್ಶನ ಮಾಡಿದವರು ಡಾ. ಸರಜೂ ಕಾಟ್ಕರ್ ಅವರು. ಈ ಕೃತಿ ೫ ನವೆಂಬರ್ ೨೦೧೭ರಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಬೃಹತ್ ಲಿಂಗಾಯತ ಸಮಾವೇಶದಲ್ಲಿ ಲೋಕಾರ್ಪಣೆಯಾಯಿತು. ಈ ಕೃತಿಯನ್ನು ಗದುಗಿನ ಜಗದ್ಗುರು ಮಹಾಸನ್ನಿಧಿಯವರು ನೋಡಿ ತುಂಬ ಸಂತೋಷಪಟ್ಟಿದ್ದರು. ಹೋದಲ್ಲಿ ಬಂದಲ್ಲಿ ಈ ಕೃತಿ ಕುರಿತು ಹೇಳಿದರು. ಬಸವರಾಜ ಹೊರಟ್ಟಿ ಅವರು ಈ ಕೃತಿ ಲೋಕಾರ್ಪಣೆಗೆ ಅಮೂಲ್ಯವಾದ ಸಹಾಯ ಮಾಡಿದ್ದರು. ಈ ಕೃತಿ ಅಲ್ಲಿ ಲೋಕಾರ್ಪಣೆ ಆಗಬಾರದೆಂದು ಕೆಲವರು ಕುತಂತ್ರ ಮಾಡಿದ್ದರು. ಆದರೆ ಡಾ. ಸರಜೂ ಕಾಟ್ಕರ್ ಅವರು ಬಸವರಾಜ ಹೊರಟ್ಟಿ ಅವರೊಂದಿಗೆ ನೇರವಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ಈ ಕೃತಿ ಅಲ್ಲಿ ಲೋಕಾರ್ಪಣೆ ಆಗಲೇಬೇಕೆಂದು ಒತ್ತಾಯಿಸಿದ್ದರು.
೨೦೨೦ರಲ್ಲಿ ನಾನು ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಸಾಹಿತ್ಯ ಪ್ರತಿಷ್ಠಾನ ಎಂಬ ಪ್ರಕಟಣಾ ಸಂಸ್ಥೆಯನ್ನು ಅಸ್ತಿತ್ವಕ್ಕೆ ತಂದೆ. ಈ ಪ್ರತಿಷ್ಠಾನದಿಂದ ಡಾ. ಸರಜೂ ಕಾಟ್ಕರ್ ಅವರ ‘ಬಂಡಾಯ ಜಗದ್ಗುರುವಿನೊಂದಿಗೆ ಮಾತುಕತೆ’ ಎಂಬ ಅಪರೂಪದ ಗ್ರಂಥವನ್ನು ಬರೆಯಿಸಿ ಪ್ರಕಟಿಸಿದೆ. ಅದು ಇಡೀ ನಾಡವರ ಗಮನ ಸೆಳೆಯಿತು.
ಗದುಗಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗಾಯತ ಪುಣ್ಯಪುರುಷ ಮಾಲೆಗೆ ಡಾ. ಸರಜೂ ಕಾಟ್ಕರ್ ಅವರೂ ಬರೆಯಬೇಕೆಂದು ಬಯಸಿದ್ದರು. ಲಿಂಗಾಯತೇತರ ವಿದ್ವಾಂಸರು ಈ ಮಾಲೆಗೆ ಬರೆದರೆ, ಅದಕ್ಕೊಂದು ಘನತೆ ಗೌರವ ಬರುತ್ತದೆಂಬ ಅಭಿಪ್ರಾಯ ಪೂಜ್ಯರದಾಗಿತ್ತು. ಹೀಗಾಗಿ ಡಾ. ಸರಜೂ ಕಾಟ್ಕರ್ ಅವರು ‘ಪಾಟೀಲ ಪುಟ್ಟಪ್ಪ’ ಮತ್ತು ‘ಪರಮೇಶ್ವರಪ್ಪ ಬಳಿಗಾರ’ ಎರಡು ಕೃತಿಗಳನ್ನು ಬರೆದು ಕೊಟ್ಟರು. ಈ ಕೃತಿಗಳ ಲೋಕಾರ್ಪಣೆ ಸಂದರ್ಭದಲ್ಲಿ ನಾನು ಬರೆದ ಕೃತಿಗಳೂ ಇದ್ದವು. ಹೀಗಾಗಿ ಅವರೊಂದಿಗೆ ಗದುಗಿನ ಶ್ರೀಮಠಕ್ಕೆ ಹೋಗಿ ಪೂಜ್ಯರ ಆಶೀರ್ವಾದ ಪಡೆದು ಬಂದ ಸಂದರ್ಭಗಳು ಇನ್ನೂ ಹಚ್ಚ ಹಸಿರಾಗಿವೆ.
೨೦೧೭ರಲ್ಲಿ ಡಾ.ಎಂ.ಎಂ. ಕಲಬುರ್ಗಿ ಅವರ ಪ್ರಥಮ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಗದುಗಿನ ಜಗದ್ಗುರುಗಳು ಧಾರವಾಡದಲ್ಲಿ ಒಂದು ಕಾರ್ಯಕ್ರಮ ಮಾಡೋಣ ಎಂದು ಬಯಸಿದರು. ಈ ಕಾಲಕ್ಕೆ ಡಾ. ಕಲಬುರ್ಗಿ ಅವರನ್ನು ಕುರಿತು ಒಂದೆರಡು ಕೃತಿಗಳನ್ನು ಪ್ರಕಟಿಸಬೇಕೆಂದು ಆಲೋಚಿಸಿದರು. ಪೂಜ್ಯರ ಬಯಕೆಯಂತೆ ಡಾ. ಸರಜೂ ಕಾಟ್ಕರ್ ಅವರು ‘ಮರಾಠಿ ಕಲಬುರ್ಗಿ’ ಎಂಬ ಕೃತಿ ಬರೆದು ಕೊಟ್ಟರು, ನಾನು ‘ಲಿಂಗಾಯತ ಅಧ್ಯಯನ ಸಂಸ್ಥೆ ಮತ್ತು ಡಾ. ಎಂ. ಎಂ. ಕಲಬುರ್ಗಿ’ ಎಂಬ ಕೃತಿ ಬರೆದೆ, ರಾಮಕೃಷ್ಣ ಮರಾಠೆ ಅವರು ಪುಣ್ಯಪುರುಷ ಮಾಲೆಗೆ ‘ಡಾ.ಎಂ. ಎಂ. ಕಲಬುರ್ಗಿ’ ಕೃತಿ ಬರೆದರು. ಈ ಮೂರು ಕೃತಿಗಳು ಧಾರವಾಡದಲ್ಲಿ ಲೋಕಾರ್ಪಣೆಯಾದವು. ಬಸವರಾಜ ರಾಯರೆಡ್ಡಿ, ಡಾ. ಗುರುಲಿಂಗ ಕಾಪಸೆ ಅವರು ಕೃತಿಗಳ ಕುರಿತು ಅದ್ಭುತವಾಗಿ ಮಾತನಾಡಿದರು. ಇದೂ ಕೂಡ ನಮ್ಮ ಜೀವನದಲ್ಲಿ ಮರೆಯಲಾರದ ಘಟನೆಯೇ ಆಗಿದೆ.
ಬೆಳಗಾವಿ ಸಾರ್ವಜನಿಕ ವಾಚನಾಲಯದವರು ಪ್ರತಿವರ್ಷ ಸಂಶೋಧನಾತ್ಮಕ ಲೇಖನ ಬರೆದ ಲೇಖಕರಿಗೆ ‘ಪತ್ರಕಾರ ಪ್ರಶಸ್ತಿ’ ನೀಡಿ ಗೌರವಿಸುತ್ತಾರೆ. ೨೦೧೪ರಲ್ಲಿ ಈ ಪ್ರಶಸ್ತಿ ನನಗೆ ಬಂದಿತು. ಆಯ್ಕೆ ಸಮಿತಿಯಲ್ಲಿ ಡಾ. ಸರಜೂ ಕಾಟ್ಕರ್ ಸರ್ ಅವರೇ ಇದ್ದರು. ಈ ಪ್ರಶಸ್ತಿ ಪ್ರದಾನ ಮಾಡಲು ಅಟಲ ಬಿಹಾರಿ ವಾಜಪೇಯಿ ಮಂತ್ರಿ ಮಂಡಳದಲ್ಲಿ ರಕ್ಷಣಾ ಸಚಿವರಾಗಿದ್ದ ರಮಾಕಾಂತ ಖಲಪ್ ಅವರು ಬಂದಿದ್ದರು. ಅಂತಹ ಶ್ರೇಷ್ಠ ಸಂಸದೀಯ ಪಟುಗಳಿಂದ ನಾನು ಪ್ರಶಸ್ತಿ ಸ್ವೀಕರಿಸಿದ್ದು ನನ್ನ ಬದುಕಿನ ಭಾಗ್ಯವೆಂದು ತಿಳಿದಿರುವೆ.

೨೦೧೩ರಲ್ಲಿ ಡಾ. ಸರಜೂ ಕಾಟ್ಕರ್ ಅವರು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದರು. ಆಗ ಕೆಲವರು ಅವರ ಸಾಹಿತ್ಯ ಸಾಧನೆ ಏನು? ಎಂದು ಅಪಸ್ವರ ಎತ್ತಿದರು. ನನಗೆ ಸ್ವಲ್ಪ ಇದರಿಂದ ಸಿಟ್ಟು ಬಂದಿತು. ನಾನು ಕೇವಲ ಎಂಟು ದಿನಗಳಲ್ಲಿ ‘ಕಾವ್ಯಕಾರ್ತಿಕ ಡಾ. ಸರಜೂ ಕಾಟ್ಕರ್’ ಎಂಬ ಕೃತಿಯನ್ನು ರಚಿಸಿದೆ. ಈ ಕೃತಿ ಸಮ್ಮೇಳನದಲ್ಲಿ ಲೋಕಾರ್ಪಣೆ ಆಯಿತು. ಡಾ. ಸರಜೂ ಕಾಟ್ಕರ್ ಅವರ ಸಾಹಿತ್ಯದ ಒಟ್ಟು ನೋಟವನ್ನು ಮೊದಲ ಬಾರಿಗೆ ನಾನು ಬರೆದಿದ್ದೆ. ಈ ಕೃತಿ ಕೂಡ ಅನೇಕ ವಿದ್ವಜ್ಜನರ ಗಮನ ಸೆಳೆಯಿತು. ಮುಂದೆ ಅವರ ಸಾಹಿತ್ಯದ ಮೇಲೆ ಪಿಎಚ್.ಡಿ. ಮಾಡಿದ ಡಾ. ಆಲೂರ, ಡಾ. ಸುಬ್ರಾವ್ ಎಂಟೆತ್ತಿನವರ, ಡಾ. ವಿಲಾಸ ಕಾಂಬಳೆ ಅವರು ನನ್ನ ಕೃತಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು ಎಂಬುದು ನನಗೆ ಸಂತೋಷದ ಸಂಗತಿಯಾಗಿದೆ.
೨೦೧೦-೧೧ರಲ್ಲಿ ನನಗೆ ಅನಾರೋಗ್ಯವಾಗಿತ್ತು. ರಕ್ತಹೀನತೆಯಿಂದ ತುಂಬ ಹೈರಾಣಾಗಿದ್ದೆ. ಆಗ ಡಾ. ಸರಜೂ ಕಾಟ್ಕರ್ ಅವರು ನನ್ನನ್ನು ತಮ್ಮ ಮಗನಂತೆ ಡಾ. ಸತೀಶ ಕುಲಕರ್ಣಿ ವೈದ್ಯರ ಹತ್ತಿರ ಕರೆದುಕೊಂಡು ಹೋದರು. ಅವರು ಎಲ್ಲ ಪರೀಕ್ಷೆ ಮಾಡಿ, ನಿನ್ನ ಎಚ್.ಬಿ. ೪ಕ್ಕೆ ಇಳಿದಿದೆ. ಇನ್ನೊಂದು ಪೈಂಟ್ ಕಡಿಮೆಯಾಗಿದ್ದರೆ, ನೀನು ಹಲಗೆ ಬಾರಿಸುತ್ತಿದ್ದೆ ಎಂದರು. ನಂತರ ರಕ್ತ ಹಾಕಿದರು. ಹೀಗೆ ನನ್ನ ಅನಾರೋಗ್ಯ ಸಂದರ್ಭದಲ್ಲಿಯೂ ಡಾ. ಸರಜೂ ಕಾಟ್ಕರ್ ಅವರು ನನಗೆ ಮಾಡಿದ ಸಹಾಯ ಸಹಕಾರ ಅನನ್ಯ ಅಪರೂಪ. ಅಂತೆಯೆ ಅವರನ್ನು ಸ್ಮರಿಸುವುದು ನನ್ನ ಬದುಕಿನ ಭಾಗವೆಂದು ತಿಳಿದುಕೊಂಡಿದ್ದೇನೆ. ಕೆಲವು ದಿನಗಳ ಹಿಂದೆ ಒಬ್ಬ ಹಿರಿಯರ ಬಗ್ಗೆ ಪುಸ್ತಕ ಬರೆಯಬೇಕೆಂಬ ಒತ್ತಾಯ ಕೇಳಿ ಬಂದಿತು. ಆಗ ನಾನು ‘ಅವರು ನಮಗೆ ಆದರ್ಶವೇ ಆಗಿಲ್ಲ; ಅವರ ಕುರಿತು ಹೇಗೆ ಬರೆಯುವುದು?’ ಎಂದು ಕೇಳಿದ್ದೆ. ಅದೇ ಸಂದರ್ಭದಲ್ಲಿ ಡಾ. ಸರಜೂ ಕಾಟ್ಕರ್ ಸರ್ ಉದಾಹರಣೆಯನ್ನೂ ಕೊಟ್ಟಿದೆ. ‘ಡಾ. ಸರಜೂ ಕಾಟ್ಕರ್ ಸರ್ ಅವರು ನನ್ನ ಧರ್ಮದವರಲ್ಲ, ನನ್ನ ಜಾತಿಯವರಲ್ಲ, ಆದರೆ ನಾನು ಕಷ್ಟ ಕಾಲದಲ್ಲಿ ಇದ್ದಾಗ ನನಗೆ ಸಹಾಯ ಮಾಡಿದರು. ನಿನ್ನ ಜೊತೆ ನಾನಿದ್ದೇನೆ ಎಂದು ನೈತಿಕ ಬೆಂಬಲ ನೀಡಿದರು. ಯಾವುದಕ್ಕೂ ಹೆದರಬೇಡ, ಸಾಹಿತ್ಯ ಕ್ಷೇತ್ರದಲ್ಲಿ ನೀನು ಸಾಧನೆ ಮಾಡು’ ಎಂದು ಅಂತಃಕರಣಪೂರ್ವಕ ಶುಭ ಹಾರೈಸಿದ್ದರು. ಅಂತಹ ವ್ಯಕ್ತಿಗಳ ಬಗ್ಗೆ ಬೇಡವೆಂದರೂ ಬರೆಯಬಹುದು, ಆದರೆ ಏನೂ ಪ್ರಭಾವ ಬೀರದ ವ್ಯಕ್ತಿಗಳ ಬಗ್ಗೆ ಬರೆಯಲು ಒಂದಕ್ಷರವೂ ನನ್ನಿಂದ ಮೂಡುವುದಿಲ್ಲ ಎಂದು ಹೇಳಿದ್ದೆ.
ಇಂತಹ ಮಾನವೀಯ ಸಂವೇದನೆಯುಳ್ಳ ವ್ಯಕ್ತಿ ಡಾ. ಸರಜೂ ಕಾಟ್ಕರ್ ಸರ್ ಅವರಿಗೆ ಈಗ ಸಾಹಿತ್ಯಪ್ರಪಂಚದ ಪ್ರತಿಷ್ಠಿತ ನೃಪತುಂಗ ಪ್ರಶಸ್ತಿ ಬಂದಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ಅವರಿಗೆ ಇನ್ನೂ ಸರ್ವಶ್ರೇಷ್ಠ ಪ್ರಶಸ್ತಿಗಳು ಪ್ರಾಪ್ತವಾಗಲಿ, ಅವರಿಂದ ಸಾಹಿತ್ಯ ಲೋಕಕ್ಕೆ ಇನ್ನೂ ಮಹತ್ವದ ಕೃತಿಗಳು ಹೊರಬರಲಿ, ಅವರಿಂದ ನಮ್ಮಂತಹ ಅನಾಮಧೇಯ ಬರಹಗಾರರು ಹೊರಪ್ರಪಂಚಕ್ಕೆ ಪರಿಚಿತವಾಗಲಿ ಎಂದು ಆಶಿಸುವೆ.

-ಪ್ರಕಾಶ ಗಿರಿಮಲ್ಲನವರ, ಬೆಳಗಾವಿ
