“ನೀನಿರದೇ…”
ನೀನಿರದೇ ಈ ಸಂಜೆಯ ಮೌನಕ್ಕೂ
ಶವಸಂಸ್ಕಾರದ ಗಂಭೀರತೆ ಬಂದಿದೆ…
ಒಮ್ಮೆ ನಿನ್ನ ಹೆಸರನ್ನು ಉಚ್ಚರಿಸಿದರೆ ಸಾಕೆಂದು
ಅರಳುತ್ತಿದ್ದ ನನ್ನ ಅಂತರಂಗ,
ಈಗ ಅದೇ ಹೆಸರಿನ ಪ್ರತಿಧ್ವನಿಗೆ
ಚೂರುಚೂರಾಗಿ ಕುಸಿದು ಬೀಳುತ್ತಿದೆ
ನೀ ಹೊರಟು ಹೋದ ದಿನ—
ಅದು ಕೇವಲ ವಿದಾಯವಾಗಿರಲಿಲ್ಲ
ನನ್ನೊಳಗಿನ ವಸಂತವನ್ನೇ
ಸ್ಮಶಾಣವನ್ನಾಗಿ ಬದಲಿಸಿದ
ವಿಧಿಯ ಕರಾಳ ಘೋಷಣೆ ಆಗಿತ್ತು…
ನಿನ್ನ ನೆನಪುಗಳು ಇಂದು ಸ್ಮೃತಿಗಳಲ್ಲ…
ಎದೆಯೊಳಗೆ ಹೊತ್ತಿ ಉರಿಯುವ ಅಗ್ನಿಶಿಖೆಗಳು
ರಾತ್ರಿಯ ಕತ್ತಲಲ್ಲಿ ನಿಶ್ಶಬ್ದವಾಗಿ
ರಕ್ತ ಹೀರುವ ಅದೃಶ್ಯ ಗಾಯಗಳು
ಒಳಗೊಳಗೇ ಭಸ್ಮವಾಗುತ್ತಿದೆ
ಆತ್ಮದ ಕೂಗು…
ಒಮ್ಮೆ ನನ್ನ ಕನಸುಗಳ ಅಂಚಿನಲ್ಲಿ ನಿಂತು
“ನೀನೇ ನನ್ನ ಲೋಕ” ಎಂದ ನಿನ್ನ ಕಣ್ಣುಗಳು,
ಇಂದು ನನ್ನ ಏಕಾಂತದ ಸಮುದ್ರದ ಮೇಲೆ
ಮುಳುಗಿದ ನಕ್ಷತ್ರಗಳಂತೆ ಕಾಣುತ್ತಿವೆ
ನಿನ್ನ ಪ್ರೀತಿಯನ್ನು
ದೇವರ ವರವೆಂದು ಪೂಜಿಸಿದ್ದ ಹೃದಯಕ್ಕೆ,
ನನ್ನೊಡಗಿನ ನಿನ್ನ ನಿರ್ಲಕ್ಷ್ಯ
ಶಾಪಕ್ಕಿಂತಲೂ ಭಯಾನಕವಾಗಿ ತಟ್ಟಿದೆ…
ನೀ ದೂರ ಸಾಗಿದ ಮೇಲೆ
ಕಣ್ಣೀರು ಹಾಕುವುದನ್ನೂ ನಿಲ್ಲಿಸಿದೆ…
ಅವು ಕಣ್ಣಿನಿಂದ ಹರಿಯುವುದಿಲ್ಲ,
ಆತ್ಮದೊಳಗೆ ನಿಶ್ಶಬ್ದವಾಗಿ ನಂದಿಹೋಗುತ್ತಿವೆ
ಹಗಲು ಇರುಳೆನ್ನದೆ ನೆನಪಿನ ಚಿತಾಭಸ್ಮವ ಹೊತ್ತು
ನನ್ನ ಹೃದಯ ಒಂಟಿಯಾಗಿ ಸುಡುತ್ತಿದೆ
ನಿದ್ರೆ ಕಣ್ಮುಚ್ಚುವುದಿಲ್ಲ,
ಬೆಳಕು ಮನಸ್ಸಿಗೆ ತಲುಪುವುದಿಲ್ಲ
ಎಲ್ಲೆಡೆ ನಿನ್ನ ಅನುಪಸ್ಥಿತಿಯ ಕತ್ತಲೇ…
ನೀನಿರದೇ…
ಬದುಕು ಇನ್ನೂ ಸಾಗುತ್ತಿದೆ ಸತ್ಯ
ಆ ಬದುಕಿನ ನೀನಿಲ್ಲದ ಅನುಪಸ್ಥಿತಿಗೆ
ಕಾಲವೂ ಬಹುಬೇಗ ಸಾಗುವುದಿಲ್ಲ
ಒಡೆದ ಕನಸುಗಳ ಶವಪೆಟ್ಟಿಗೆಯಾಗಿ
ನೆನಪುಗಳು ಎದುರು ನಿಂತಿವೆ
ಹೂಳುವ ಮನಸ್ಸಿಲ್ಲ ನನಗೆ
ಉಳಿದಿರುವುದು ಕೇವಲ—
ನಿನ್ನ ಹೆಸರನ್ನು ಮೌನದಲ್ಲಿ ಜಪಿಸುತ್ತಿರುವ
ಗಾಯಗೊಂಡ ಹೃದಯದ
ಕೊನೆಯ ಸ್ಪಂದನೆ ಮಾತ್ರ…❤️

✍️ಸೌಮ್ಯ ಬಿ ವಿಶ್ವಮೈತ್ರಿ, ಪುತ್ತೂರು
—–
