ಅನುದಿನ ಕವನ-೧೯೭೩, ಕವಿ: ನಾಗೇಂದ್ರ ಬಂಜಗೆರೆ, ಬಳ್ಳಾರಿ, ಕವನದ ಶೀರ್ಷಿಕೆ: ವರ್ಷಾಧಾರೆ ಹರುಷ ತಾರೆ..

ವರ್ಷಾಧಾರೆ ಹರುಷ ತಾರೆ..

ವರುಷ ಧಾರೆ ಈ ಧರೆಯ ಜೀವ ನೀನು..
ನಿನ್ನಾಗಮನಕ್ಕಾಗಿ ಎಲ್ಲರ ಗಮನ..
ಸುರಿಸು ಬಾ ವರ್ಷಧಾರೆ..ಸೇರಿಕೋ ಭರತಧರೆ
ಹರಿಸು ವರುಷದಹರ್ಷದ ಹೊಳೆಯ..

ನನ್ನವಳ ತವರು ಮಳೆಯನಾಡು..
ನನ್ನ ಒಲವಿನಸುಧೆಗೆ ಜೊತೆಯಾಗಿ ಉಳಿದಿಹಳು ಉರಿ ಬಿಸಿಲ ಬೆಂಗಾಡು..
ಎದುರು ನೋಡುತಿಹಳು ಅವಳು ಎನಗಿಂತ ನಿನ್ನಾಗಮನವ..
ಸುರಿಸು ಬಾ ಬಿರಿಸುಮಳೆಯ ನನ್ನ ಮನದವಳ ಮನವ ತಣಿಯೇ ಕೇಳದೇ ಎನಗೆ ಸುರಿವವಳು ಮುತ್ತಿನ ಸುರಿಮಳೆಯ.

ನಿನ್ನ ಕರೆಯದವರಿಲ್ಲ
ಮುತ್ತಿನ ಹನಿಯಲಿ ನೆನೆಯದವರಿಲ್ಲ,
ನಾನೋ ಆ ಕ್ಷಣವ ನೆನೆ ನೆನೆದು ಕಾಯುತ್ತಿರುವೆ ನನ್ನವಳ ಜೊತೆಯಲಿ
ಮತ್ತೆ ಮತ್ತೆ ಮಳೆಯಲಿ ಮಿಂದು ಸಂಭ್ರಮಿಸಲು..

ಮುಗಿಲಲಿ ಮಳೆಯ ಕಾರ್ಮೋಡವ ಹೊತ್ತು ಎಲ್ಲಿ ಹೋಗುತ್ತಿರುವೆ ಓ ಗಾಳಿಯೇ??
ಇತ್ತ ಕಡೆಯಾವಾಗ ಬರುವೆ ಅಂತ ಹೇಳಿ ಹೋಗು ನಾನು ಕಾಯುತಲಿರುವೆ..
ಅಲ್ಲಿ ನೋಡು ಅನ್ನಧಾತ ಮೇಳಿಯ ಹಿಡಿದು ಕಾಯುತಿಹನು ಉಳಲು ನೆಲವ..

ಮುಂಗಾರಿನ ಸಿಂಚನಕೆ ದಗೆಯಧರೆ ತಂಪಾಯಿತು
ಮಳೆಯಿಂದಾಗಿ ಭರವಸೆಯ ಹೊಲದಲಿ ಮೂಡಿತು ನೇಗಿಲು ಕುಂಟೆ ರಂಟೆಯ ಗೆರೆಯು..
ರೋಣಿ ಮಳೆ ಬಂದ್ರೆ ಓಣಿ ತುಂಬಾ ಕಾಳಂತೆ*
ಉತ್ತಿದ ನೆಲವ ಬಿತ್ತಿದ ಬೀಜವ ತನ್ನ ಕಾಯಕ ಬಿಡದಂತೆ..

‘ಪುನರ್ವಸೂನಾಂ ರಜಸ್ವಲಾ ಧರಿತ್ರಿಃ’..
ಅಶ್ಲೇಷ ಪುಷ್ಯ ಸುರಿಸಲು
ಮಾಘ ಮಳೆಗೆ ಭುವಿಯ ತುಂಬಾ ಮೊಗ್ಗಾಗಿ ಭೂತಾಯಿ ಕಾಣಿಪಳು ಮೈದೊಳೆದು
ಹಸಿರು ಸೀರೆಯುಟ್ಟು ಹೂ ಮುಡಿದು ಸಿಂಗರಿಸಿಕೊಂಡು
ಕಾಯುತಿಹಳು ಸೀಮಂತಕೆ..

ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನಹಾಗೆ ಎಡೆಬಿಡದೆ ಸುರಿಸುತ್ತಿರುವ ಮಳೆರಾಯ ಬೇಸಿಗೆಯ ಬೆವರ ತಾಳದೇ ಹಾಡಿದ ಬಾರೋ ಬಾರೋ ಮಳೆರಾಯ ಹಾಡ ಕೇಳಿ.!!
ಆರಿದ್ರ ಮಳೆ ಆರದೇ ತೋರಿಪನು ಒಮ್ಮೊಮ್ಮೆ ಅಬ್ಬರಿಸಿ ಬೊಬ್ಬಿರಿದಿ ನೆರಯಲಿ ಧರೆಯ ಮುಳುಗಿಸಿ ರಣಕೇಕೆ ಹಾಕುವೆ ದೀಪಾವಳಿಯಲಿ ದೀಪವೂ ಹಚ್ಚಲು ಬಿಡದೆ..ವರುಣ ನಿನಗಿಲ್ಲವಾ ಕರಣಾ..ಹೋಗುವೆ ನಮ್ಮುಡುಗರು rain rain go away ಎಂದಾಡಿದಮೇಲೆ..

ರಾತ್ರಿಯೆಲ್ಲಾ ಸೋನೆಯ ಶೃತಿ ಕೇಳಿ ಅರುಣರಾಗದಿ ಎದ್ದು ತರಿಕೆರೆ ಏರಿಮೇಲೆ ಕಪ್ಪು ಕೊಡೆ ಹಿಡಿದು ಹೊರಟಿದ್ದೆ ಹುಡುಕಲು ಬಿಳಿಯಕೊಡೆ..
ಅಂದು ಕೊಡೆಯ ಹಿಡಿದು ತಂದಿದ್ದೆ ನನ್ನ ನಲ್ಲೆಗೆ ಜಲ್ಲೆಯಷ್ಟು ಬಿಳಿಯ ನಾಯಿಕೊಡೆ..! ಅಲ್ಲೊಂದು ಚಿಟ್ಟೆ ಆಶ್ರಯ ಪಡೆದಿತ್ತು ಅರಳಿದ ಬಿಳಿಯ ಛತ್ರಿಯ ಕೆಳಗೆ ಮನುಜಗೆ ಇದೇ ಸ್ಪೂರ್ತಿ ಇರಬೇಕು ಕೊಡೆಯ ಹಿಡಿಯಲು…

ಜಡಿ ಮಳೆಗೆ ಅಂಜಿ ಪಡೆವರಿದ್ದರು ಗೊಬಾಳೆ ಆಸರೆ ಬಿರುಮಳೆಗೆ ಕೊಡೆಯಾಗಿ ಒಂದು ಕಾಲ ಇತ್ತು ಛತ್ರಿ ಹಿಡಿದವರ ಗಾಂಭೀರ್ಯ
ನ್ಯಾಯಕೆ ಸಾಕ್ಷಿ ಆಗಿತ್ತು ಛತ್ರಿ.
ಈಗ ಬಿಡಿ ಸರ್ವರೂ ಆಗಿದ್ದಾರೆ ಒಂಥರಾ ಥರ ಥರ ಛತ್ರಿ…!

ಬಾಮಳೆಯೇ ಬಾ ಇಳೆಯ ಆರದಂತೆ ಬಾ..
ದುಂಬಿಗಳ ನಗುವ ನೋಡು ಬಾ ಧರಿತ್ರಿಯ ಸಿಂಗಾರ ನೋಡಲು ಬಾ
ಕೊಲ್ಮಿಂಚು ಸಿಡಿಲ ಸಿಡಿಸುತಾ ಬಾ…
ನನ್ನ ಎದೆಯ ಬಿಸಿ ಆರದಂತೆ ಸುರಿ ಪ್ರತಿರಾತ್ರಿ…

✍️ನಾಗೇಂದ್ರ ಬಂಜಗೆರೆ,  ಬಳ್ಳಾರಿ

Leave a Reply

Your email address will not be published. Required fields are marked *