‘ಬಳ್ಳಾರಿ ವಿವಿಯ ಅತಿಥಿ ಗೃಹವಾಯ್ತು 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ’

ಬಳ್ಳಾರಿ: ನಗರದ ವಿಎಸ್‍ಕೆ ವಿವಿಯ ಅತಿಥಿ ಗೃಹ ಇದೀಗ 50 ಹಾಸಿಗೆಯ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರವಾಗಿ ಬದಲಾಗಿದೆ.
ಹೌದು. ವಿವಿ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ಅವರು ಈ ವಿಷಯವನ್ನು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ಬಡವರು ಮತ್ತು ಮಧ್ಯಮ ವರ್ಗದ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಮತ್ತು ಕೋವಿಡ್ ಚಿಕಿತ್ಸೆ ನೀಡುವ ಉದ್ದೇಶದಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು
ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಮತ್ತು ಸೇವಾ ಭಾರತಿ ಸಹಯೋಗದಲ್ಲಿ ವಿವಿಯ ಅತಿಥಿ ಗೃಹದಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಐಸೋಲೇಶನ್ ಕೇಂದ್ರ ಪ್ರಾರಂಭಿಸಲಾಗಿದೆ ಎಂದು ಕುಲಪತಿ ಹೇಳಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆಯ ಅನುಮತಿ ಪಡೆದು ವಿವಿ ಎರಡು ಸಂಸ್ಥೆಗಳ ಸಹಯೋಗದಲ್ಲಿ ವಿವಿಯ ಅತಿಥಿ ಗೃಹದಲ್ಲಿ 50 ಹಾಸಿಗೆಯೊಂದಿಗೆ ಕೋವಿಡ್ ಕೇರ್ ಐಸೋಲೇಶನ್ ಪ್ರಾರಂಭಿಸಲಾಗಿದೆ. ಮನೆಯಲ್ಲಿ ಸೂಕ್ತ ರೀತಿಯಲ್ಲಿ ಐಸೋಲೇಶನ್‍ನಲ್ಲಿ ಇರಲು ಸಾಧ್ಯವಾಗದಂತ ಕೋವಿಡ್ ರೋಗಿಗಳಿಗೆ ಐಸೋಲೇಶನ್ ಕೇಂದ್ರ ನೆರವಾಗಲಿದೆ ಎಂದರು.
ಕೇಂದ್ರ ಸಂಪೂರ್ಣವಾಗಿ ಮನೆಯ ಪರಿಸರದಂತೆ ಇರುತ್ತದೆ ಆದರೆ ಯಾವುದೇ ರೀತಿಯ ಆಕ್ಸಿಜನ್, ವೆಂಟಿಲೇಟರ್,ಐಸಿಯು ಹಾಸಿಗೆ ಇರುವುದಿಲ್ಲ ಇದು ಕೇವಲ ಐಸೋಲೇಶನ್ ಕೇಂದ್ರವಷ್ಟೇ ಎಂದು ಮಾಹಿತಿ ನೀಡಿದರು.
ಐಸೋಲೇಶನ್ ಕೇಂದ್ರದಲ್ಲಿರುವ ಕೋವಿಡ್ ರೋಗಿಗಳಿಗೆ ಆರೋಗ್ಯದಲ್ಲಿ ಏರುಪೇರಾದರೆ ಜಿಲ್ಲಾಡಳಿತದ ಗಮನಕ್ಕೆ ತಂದು ಅವರ ಸೂಚನೆಯಂತೆ ಸೂಕ್ತ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗೆ ಅವರನ್ನು ಸ್ಥಳಾಂತರಿಸಲಾಗುವುದು. ಕೇಂದ್ರದಲ್ಲಿ ಎಲ್ಲಾ ರೀತಿಯ ಚಿಕಿತ್ಸೆ, ಔಷಧಿ ನೀಡುವುದರ ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ರೋಗಿಗಳಿಗೆ ಆಹಾರ ಪೂರೈಸಲಾಗುತ್ತದೆ ಎಂದು ಪ್ರೊ.ಸಿದ್ದು ತಿಳಿಸಿದರು.
ಕೋವಿಡ್ ಪಾಸಿಟಿವ್ ವರದಿಯ ಜೊತೆಗೆ ವೈದ್ಯರ ಸೂಚನೆಯ ಮೇರೆಗೆ ಐಸೋಲೇಶನ್ ನಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿ ನುರಿತ ವೈದ್ಯರ ಜೊತೆಗೆ ಕೋವಿಡ್ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ನರ್ಸ್‍ಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದಾರೆ. ರೋಗಿಗಳಿಗೆ ಪ್ರತಿದಿನ ನುರಿತ ಯೋಗಪಟುಗಳಿಂದ ಯೋಗ ಮಾಡಿಸಲಾಗುತ್ತದೆ. ರೋಗಿಗಳು ಮಾನಸಿಕ ಮತ್ತು ದೈಹಿಕವಾಗಿ ಶೀಘ್ರದಲ್ಲಿ ಚೇತರಿಸಿಕೊಳ್ಳುವ ನಿಮಿತ್ತ ಉತ್ತಮ ಪುಸ್ತಕಗಳನ್ನು ಮತ್ತು ಶಿಕ್ಷಣ, ಸೃಜನಶೀಲ ವೀಡಿಯೋಗಳನ್ನು ತೋರಿಸುವ ಮೂಲಕ ಕೋವಿಡ್ ರೋಗಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತದೆ ಎಂದು ವಿವರಿಸಿದರು.
ಕೋವಿಡ್ ಕೇರ್ ಐಸೋಲೇಶನ್ ಕೇಂದ್ರಕ್ಕೆ ನೋಡೆಲ್ ಮತ್ತು ಸಹಾಯಕ ನೋಡೆಲ್ ಅಧಿಕಾರಿಗಳಾಗಿ ವಿವಿಯ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿವಿ ಕುಲಸಚಿವ ಪ್ರೊ. ಶಶಿಕಾಂತ್ ಉಡಿಕೇರಿ, ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್(ಜೀತೋ) ಅಧ್ಯಕ್ಷ ಸಿ.ಎ.ವಿನೋದ್ ಬಗ್ರಿಚಾ, ಮುಖ್ಯ ಕಾರ್ಯದರ್ಶಿ ವಿಮಲ್ ಜೈನ್, ಸಿಸಿಬಿ ಮಹಾವೀರ್ ಭೂರತ್, ಬೋರ್ಡ್ ಮೆಂಬರ್ ಕೈಲಾಸ್ ಜೈನ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಕಾರ್ಯದರ್ಶಿಪ್ರಸನ್ನಾಜೀ, ಮುಖಂಡರಾದ ಸತೀಶ್ ಕುಮಾರ್, ನರೇಶ್ ಚಿನರಾಯಿ, ಡಾ.ವಿಜಯ್ ಭಾಸ್ಕರ್ ರೆಡ್ಡಿ, ರಾಘವೇಂದ್ರ ಅವರು ಇದ್ದರು.

*****

*****

Leave a Reply

Your email address will not be published. Required fields are marked *