ಬಳ್ಳಾರಿಯಲ್ಲಿ ಸಂಭ್ರಮದ ಬುದ್ಧ ಜಯಂತ್ಯೋತ್ಸವ: ಜ್ಞಾನದ ಬೆಳಕು ಭಗವಾನ್ ಬುದ್ಧ -ಲಿಡ್‌ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

ಬಳ್ಳಾರಿ,ಮೇ 12: ಭಗವಾನ್ ಬುದ್ಧರ ಜ್ಞಾನ ಇಡೀ ಜಗತ್ತಿಗೆ ಪಸರಿಸಿದೆ. ಅವರ ಶಾಂತಿ, ಸಹನೆ, ಸಹಬಾಳ್ವೆ ಸಂದೇಶ ನಮಗೆಲ್ಲರಿಗೂ ಸ್ಫೂರ್ತಿ ಎಂದು ಡಾ.ಬಾಬು ಜಗಜೀವನ್‌ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಹೇಳಿದರು

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದಲ್ಲಿ ಸೋಮವಾರ ಸಂಜೆ ಏರ್ಪಡಿಸಿದ್ದ ಭಗವಾನ್ ಬುದ್ಧರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜ್ಞಾನದ ಬೆಳಕು ಜಗತ್ತಿಗೆ ನೀಡಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧ ಅವರ ತತ್ವಾದರ್ಶ ನಾವೆಲ್ಲರೂ ಪಾಲಿಸೋಣ.
ಅಜ್ಞಾನದಿಂದ ಜ್ಞಾನದ ಕಡೆ, ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಮಹಾನ್ ವ್ಯಕ್ತಿ ಭಗವಾನ್ ಬುದ್ಧ. ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ರವರು ಸಹ ಬೌಧ್ದ ಧರ್ಮ ಸ್ವೀಕರಿಸುವ ಮೂಲಕ ಬೌಧ್ದ ಧರ್ಮವನ್ನು ಬೆಂಬಲಿಸಿದರು ಎಂದು ತಿಳಿಸಿದರು.

  ರಾಜಕುವರ ಸಿದ್ಧಾರ್ಥ ವೈಭೋಗವನ್ನು ತ್ಯಜಿಸಿ, ಜ್ಞಾನೋದಯ ಪಡೆದು ಗೌತಮ ಬುದ್ಧನಾಗುತ್ತಾನೆ. ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ಭೋಧಿಸುತ್ತಾನೆ. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯ ಸ್ಮರಿಸುವ ಉದ್ದೇಶದಿಂದ ಸರ್ಕಾರದಿಂದ ಪ್ರಥಮವಾಗಿ ಬುದ್ಧ ಜಯಂತಿ ಆಚರಿಸಲಾಗುತ್ತಿದೆ. ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಮಹತ್ವದ ದಿನವಾಗಿದೆ ಎಂದ ಅವರು, ಬುದ್ಧ ಹೇಳಿದ ಬೌದ್ಧ ಧರ್ಮದ ಮೂರು ಸಂದೇಶವನ್ನು ಇದೇ ವೇಳೆ ಸ್ಮರಿಸಿದರು.
ಸಹಾಯಕ ಆಯುಕ್ತ ಪಿ.ಪ್ರಮೋದ್ ಅವರು ಮಾತನಾಡಿ, ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವ ಭೋದಿಸಿದ ಬುದ್ಧರ ತತ್ವ ಬೋಧನೆ ಅರಿತರೆ ಜೀವನದಲ್ಲಿ ಸುಖ–ಶಾಂತಿ ನೆಮ್ಮದಿ ನೆಲೆಯೂರಲಿದೆ. ಬುದ್ಧನ ಜ್ಞಾನ ಮಾರ್ಗ ಅರಿತರೆ ಅದು ಮನುಷ್ಯರ ಮನಸ್ಸಿನ ಶುದ್ಧಿ ಮತ್ತು ಇದರಿಂದ ದುಃಖ ನಿವಾರಣೆ ಹೊಂದಲು ಸಾಧ್ಯವಾಗಲಿದೆ ಎಂದರು.


ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಸಂಸ್ಕೃತಿ ಚಿಂತಕ ಡಾ.ವೆಂಕಟಗಿರಿ ದಳವಾಯಿ ಅವರು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಜಡೇಶ್ ಎಮ್ಮಿಗನೂರು ತಂಡದಿಂದ ಬುದ್ಧ ಬಸವ ಅಂಬೇಡ್ಕರ್ ಗೀತೆ ಗಾಯನ ಪ್ರಸ್ತುತ ಪಡಿಸಿದರು.
ಇದಕ್ಕೂ ಮುನ್ನ ಭಗವಾನ್ ಬುದ್ಧ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಭಾರತೀಯ ಬೌದ್ಧ ಮಹಸಭಾ ಜಿಲ್ಲಾ ಘಟಕ ಅಧ್ಯಕ್ಷ ಕಮಲರತ್ನ ಬಂತೇಜಿ, ಅಂಬೇಡ್ಕರ್ ಸಂಘದ ಜಿಲ್ಲಾಧ್ಯಕ್ಷ ಅನಂತ ಕುಮಾರ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಸಂಭ್ರಮದ ಮೆರವಣಿಗೆ:  ಭಗವಾನ್ ಬುದ್ಧರ ಜಯಂತ್ಯೋತ್ಸವದ ಅಂಗವಾಗಿ ನಗರದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಭಗವಾನ್ ಬುದ್ಧ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಗಮನ ಸೆಳೆದವು.
ಮೆರವಣಿಗೆಯು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ, ರೈಲ್ವೆ ಸ್ಟೇಷನ್ ರಸ್ತೆ, ಹೆಚ್.ಆರ್.ಗವಿಯಪ್ಪ ವೃತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನ ಗೊಂಡಿತು.                     ಮೆರವಣಿಗೆಯಲ್ಲಿ ಅರಿವು‌ ಸಂಘಟನೆಯ‌ ಸಿರಿಗೆರೆ ಪನ್ನರಾಜ್, ಡಿಎಸ್ ಎಸ್ ಮುಖಂಡ‌ಎ.ಕೆ. ಗಂಗಾಧರ್,  ಕಮಲಕರ ಬಂತೇಜಿ, ಬಳ್ಳಾರಿ ಜಿಲ್ಲಾ ಛಲವಾದಿ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಗೂಳಪ್ಪ‌ಬೆಳ್ಳಿಕಟ್ಟೆ, ಪ್ರಧಾನ ಕಾರ್ಯದರ್ಶಿ ಸಿ.ಹನುಮಪ್ಪ, ಸದಸ್ಯರಾದ ರುದ್ರಯ್ಯ ಕೊಳಗಲ್ಲು, ನ್ಯಾಯವಾದಿ ಲಕ್ಷ್ಮಣ, ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ‌ಮುಖಂಡರಾದ ಅನಂತಕುಮಾರ್, ಸಿ.ಎರ್ರೆಣ್ಣ,  ಯುವ ಮುಖಂಡರಾದ ಓಂಕಾರಪ್ಪ‌ ಕಪಗಲ್ಲು, ಕುಡುತಿನಿ ಆನಂದ್‌ಕುಮಾರ್, ಸಿಎಂಎಸ್ ಅಧ್ಯಕ್ಷ ಸಿ. ಶಿವಕುಮಾರ್, ದೀಕ್ಷಾ ಶಂಕರ್, ಬಸವದಳ‌ ಹಾಗೂ  ಬೌದ್ಧ ಸಂಘಟನೆಯ ಹಲವು ಮುಖಂಡರು ಉತ್ಸಾಹದಿಂದ‌ ಭಾಗವಹಿಸಿದ್ದರು
————