ಬಾಲ್ಯದಲ್ಲಿ ಜೀತ ಮಾಡುತ್ತಾ ಅಕ್ಷರ ಕಲಿತ ಹೊಸಪೇಟೆಯ ಕೆ.ಲಕ್ಷ್ಮಣನಿಗೆ ಒಲಿದು ಬಂತು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರರಾದ ಕೆ.‌ಲಕ್ಷ್ಮಣ ಅವರನ್ನು ಜ.10 ರಂದು ಹೊಸಪೇಟೆಯಲ್ಲಿ ಡಾ.‌ಬರಗೂರು ಅವರ ಸೌಹಾರ್ದ ಭಾರತ ಕೃತಿ‌ ಬಿಡುಗಡೆ ಸಮಾರಂಭದಲ್ಲಿ ಗಣ್ಯರು ಸನ್ಮಾನಿಸಿ ಗೌರವಿಸಿದರು. ಡಾ. ಕುಂವೀ, ಡಾ.‌ಅಮರೇಶ‌ ನುಗಡೋಣಿ, ಕರ್ನಾಟಕ ಸೌಹಾರ್ದ ಸಂಸ್ಥೆ ಮತ್ತು ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

(ಸಿ.ಮಂಜುನಾಥ)
ಹೊಸಪೇಟೆ(ವಿಜಯನಗರ), ಜ. 10: ಬಡವರಿಗೆ ಮಕ್ಕಳು ಹೆಚ್ಚೆನ್ನುವಂತೆ ಹೊಸಪೇಟೆ ತಾಲೂಕಿನ
ತಿಮ್ಮಲಾಪುರ ಗ್ರಾಮದ ನಿಂಗಪ್ಪ ಮತ್ತು ಹನುಮವ್ವ ದಂಪತಿಗಳಿಗೆ ಬರೋಬ್ಬರಿ 14 ಜ‌ನ ಮಕ್ಕಳು! ಅದು 80ರ ದಶಕ…‌ಕಿತ್ತು ತಿನ್ನುವ ಬಡತನ ಜತೆಗೆ ಆ ವರ್ಷ ಬರಗಾಲ! ಕುಟುಂಬ ಸಲುಹಲು ಗುಳೇ ಹೋದದ್ದು ಕಂಪ್ಲಿ- ರಾಮಸಾಗರ ಸಮೀಪದ ಮುದ್ದಾಪುರ-೧೦ ಗ್ರಾಮಕ್ಕೆ! ಗ್ರಾಮದ ನೀರಗಂಟಿಯಾಗಿ ಕೆಲಸ ಆರಂಭಿಸಿ ಕುಟುಂಬ ನಿರ್ವಹಿಸುತ್ತಿದ್ದರು. ನಿಂಗಪ್ಪನಿಗೆ ಮನೆ ತುಂಬಾ ಮಕ್ಕಳಿದ್ದರೆ ಹೊಸಪೇಟೆಯ ಚಿತ್ತವಾಡ್ಗಿಯಲ್ಲಿದ್ದ ತರಕಾರಿ ಮಾರಿ ಹೊಟ್ಟೆ ತುಂಬಿಕೊಳ್ಳುತ್ತಿದ್ದ ತಂಗಿ ಸಣ್ಣ ದುರುಗಮ್ಮ ಇರುವ ಒಬ್ಬ ಮಗನನ್ನು ಮಕ್ಕಳಿಲ್ಲದ ತಳವಾರ ಕೇರಿಯಲ್ಲಿದ್ದ ದೊಡ್ಡಕ್ಕನ ಮನೆಯಲ್ಲಿ‌ ಬಿಟ್ಟಳು.
ಮನೆ ಬೀಕೋ ಎನ್ನುತ್ತಿದ್ದಾಗ ಅಣ್ಣನ ನೆನಪಾಗಿ ಏಳೆಂಟು‌ ವರ್ಷದ ಲಕ್ಷ್ಮಣನನ್ನು ನಾನು‌ ಸಾಕುವೆ ಕಳುಹಿಸಿ ಕೊಡು ಎಂದು ಕೇಳಿಕೊಂಡಾಗ ಅಣ್ಣ‌ ನಿಂಗಪ್ಪನಿಗೆ ಇಲ್ಲವೆನ್ನಲಾಗಲಿಲ್ಲ. 12 ನೇ ಮಗನಾಗಿದ್ದ ಲಕ್ಷ್ಮಣನನ್ನು ತಂಗಿಯ‌ ಮಡಲಿಗೆ ಹಾಕಿದರು. ಹೀಗೆ ಚಿತ್ತವಾಡ್ಗಿ‌ ಬಂದ ಲಕ್ಷ್ಮಣ ಅಣ್ಣನ ಮದುವೆಗೆ ಅಪ್ಪ ಸಾಲ ಮಾಡಿದ್ದಕ್ಕಾಗಿ ಮೂರು ವರ್ಷ ಒಬ್ಬರ ಮನೆಯಲ್ಲಿ ಜೀತಕ್ಕೆ ದುಡಿದರು. ವರ್ಷಕ್ಕೆ 150 ರೂ. ಉಡಲು ಬಟ್ಟೆ, ಊಟ ನೀಡುತ್ತಿದ್ದರು. ಜೀತ ಇದ್ದ ಮನೆಯಲ್ಲಿದ್ದ ದನಗಳನ್ನು‌ ಮೇಯಿಸುವುದು, ಮೇವು ತರುವುದು ಬಾಲಕ ಲಕ್ಷ್ಮಣನ ದಿನ ನಿತ್ಯದ ಕಾಯಕ. ಹೀಗೆ ದನಕಾಯುತ್ತಿದ್ದ ಹುಡುಗ ವಿನೋಭಬಾವೆ ಸರಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದ ಕೆ. ಭಗವಂತರಾವ್ ಅವರ ಕಣ್ಣಿಗೆ‌ ಬಿದ್ದದ್ದೇ ಕೇಳಿ ಬಿಟ್ಟರು…. ಏನಪಾ ಶಾಲೆಗೆ ಸೇರ್ತೀಯಾ ಅಂತಾ! ತಿಮ್ಮಲಾಪುರ ಶಾಲೆಯಲ್ಲಿ ಒಂದನೇ ತರಗತಿ ಓದಿದ್ದ ಹುಡುಗನ ಸಂತೋಷಕ್ಕೆ ಪಾರವೇ ಇರಲಿಲ್ಲ. ನೇರವಾಗಿ ನಾಲ್ಕನೇ ತರಗತಿಗೆ ಪ್ರವೇಶ ಪಡೆದು ಶಾಲೆಗೆ ಹೋಗಿ, ಓದಲು ಆರಂಭಿಸಿದ ಲಕ್ಷ್ಮಣ ನಿಲ್ಲಿಸಿದ್ದು ಪ್ರಸಿದ್ಧ ವಿಜಯನಗರ ಕಾಲೇಜಿನಲ್ಲಿ ಬಿ.ಎ ಪದವಿ ಪೂರೈಸಿದಾಗ! ಹಾಗಂತ ಶಾಲಾ ಕಾಲೇಜು ದಿನಗಳಲ್ಲಿ ಕಷ್ಟಗಳೇ ಇರಲಿಲ್ಲ ಎಂದರೆ ತಪ್ಪಾಗುತ್ತದೆ! ಹೌದು….ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ಓದುವಾಗಲೂ ಬೆಳಗಿನ ಜಾವ ಮನೆ ಮನೆಗೆ ಪತ್ರಿಕೆ ಹಾಕುವುದು, ಎಂದಿನಂತೆ ಬೆಳಿಗ್ಗೆ-ಸಂಜೆ ಗದ್ದೆಗೆ ಹೋಗಿ ಮೇವು ತರುವುದು, ರಜೆಯ ದಿನಗಳಲ್ಲಿ ಕಬ್ಬು, ಬಾಳೆ ಕಡಿಯಲು ಹೋಗಿ ಹಣ ಸಂಪಾದಿಸುವುದು….. ಕಾಲೇಜು ಫೀಜು ಮತ್ತಿತರ ಖರ್ಚಿಗೆ ಹೊಂದಿಸಿ ಕೊಳ್ಳುವುದು….ಹೀಗೆ ಜೀವನ ನಡೆಯುತ್ತಿದ್ದಾಗ ಲಕ್ಷ್ಮಣನಿಗೆ 1993ರಲ್ಲಿ ಅದೃಷ್ಟ ಒದಗಿ‌ ಬರುತ್ತದೆ. ಮನೆ ಮನೆಗೆ ಸಂಕ ಪತ್ರಿಕೆ ಹಾಕುತ್ತಿದ್ದ….ಲಕ್ಷ್ಮಣನಿಗೆ!  ಸಂಯುಕ್ತ ಕರ್ನಾಟಕ ಮತ್ತು ಹಿಂದು ಪತ್ರಿಕೆಗಳ ಏಜೆಂಟ್ ರು ಕಾರಣಾಂತರಗಳಿಂದ ಏಜೆನ್ಸಿ ಬಿಡುವ ಸಂದರ್ಭ ಬರುತ್ತದೆ. ಇದೇ ವೇಳೆ ಹೊಸಪೇಟೆಗೆ ಬಂದಿದ್ದ ಹೆಸರಾಂತ ಪತ್ರಕರ್ತ, ಲೋಕ‌ಶಿಕ್ಷಣ ಟ್ರಸ್ಟ್ ನ ಟ್ರಸ್ಟಿ, ಸಂಪಾದಕ ಕೆ. ಶಾಮರಾವ್ ಅವರ ಪರಿಚಯವಾಗಿ ಸಂಯುಕ್ತ ಕರ್ನಾಟಕ(ಸಂಕ) ಪತ್ರಿಕೆಯ ಹೊಸಪೇಟೆ ನಗರದ ಏಜೆಂಟ್ ಆಗುತ್ತಾರೆ. ಅಂದು1200 ಪ್ರಸಾರವಿದ್ದ ಸಂಕ ಪತ್ರಿಕೆಗೆ ಸಾಲ ಸೋಲ‌ ಮಾಡಿ 35 ಸಾವಿರ ಠೇವಣಿ ಹೊಂದಿಸುತ್ತಾರೆ.


1993 ರಿಂದ ಆರಂಭವಾದ ಸಂಕ‌ ದೊಂದಿಗಿನ‌ ಬಾಂಧವ್ಯ 2026 ರಲ್ಲೂ ಮುಂದುವರೆದಿದೆ.
1994ರಲ್ಲಿ ಏಜೆನ್ಸಿಯೊಂದಿಗೆ ಗೌರವ ಬಿಡಿ ಸುದ್ದಿಗಾರರಾಗಿ, 1996ರಲ್ಲಿ‌ ತಾಲೂಕು ವರದಿಗಾರರಾಗಿ, ನಾಲ್ಕು ವರ್ಷಗಳ ಹಿಂದೆ ನೂತನವಾಗಿ ವಿಜಯನಗರ ಜಿಲ್ಲೆಯಾದಾಗ ಸಂಕ‌ ಜಿಲ್ಲಾ ವರದಿಗಾರರಾಗಿ ನೇಮಕ ವಾಗುತ್ತಾರೆ. ಮೂರು ದಶಕಗಳಲ್ಲಿ ಜನಮುಖಿ ವರದಿಗಾರಿಕೆಯಿಂದ, ಸರಳ‌ ಸಜ್ಜನಿಕೆ ವ್ಯಕ್ತಿತ್ವದಿಂದ ಜನಪ್ರಿಯರೂ ಆಗುತ್ತಾರೆ.
ಜೀತ ದುಡಿಯುತ್ತಿದ್ದ ಬಾಲಕ ಲಕ್ಷ್ಮಣರ ಅಕ್ಷರ ವ್ಯಾಮೋಹ, ಪತ್ರಿಕಾರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ 2025 ರ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿಯೂ ಹುಡುಕಿಕೊಂಡ ಬಂದಿದೆ.
ಹಲವು ಉತ್ತಮ‌ ವರದಿಗಳು ಸಮಾಜ, ಸಂಘ ಸಂಸ್ಥೆಗಳ ಗಮನ ಸೆಳೆದಿದ್ದು ದಶಕಗಳ ಹಿಂದೆಯೇ ಬಳ್ಳಾರಿಯ ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ನೀಡುವ ಡಾ.‌ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ಲಕ್ಷ್ಮಣ ಭಾಜನರಾಗಿದ್ದಾರೆ.  ಹೊಸಪೇಟೆ ಸೇರಿದಂತೆ ಜಿಲ್ಲೆಯ ಹಲವು ಸಂಘ ಸಂಸ್ಥೆಗಳು ಸತ್ಕರಿಸಿ ಗೌರವಿಸಿವೆ.


ತಾನು ಓದಿದ ವಿನೋಬಾಭಾವೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾಗಿ ತಮ್ಮ ಅವಧಿಯಲ್ಲಿ 21 ನೂತನ‌ ಕೊಠಡಿಗಳನ್ನು ಸರಕಾರದಿಂದ ಮಂಜೂರು ಮಾಡಿಸಿ‌ ನಿರ್ಮಿಸಿರುವುದು ನನ್ನ ಸೌಭಾಗ್ಯ ಎಂದು ಸಂತಸ‌ ವ್ಯಕ್ತಪಡಿಸುತ್ತಾರೆ ಲಕ್ಷ್ಮಣ ಅವರು!  ಸಮಾಜ ಸೇವೆ ಜತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ‌ಸಂಘದ ಸದಸ್ಯರಾಗಿ ಕಳೆದ ನಾಲ್ಕು ವರ್ಷಗಳಿಂದ ವಿಜಯನಗರ ಜಿಲ್ಲಾ ಘಟಕದ ಪ್ರದಾನ ಕಾರ್ಯದರ್ಶಿಯಾಗಿ ಸಂಘಟನೆ, ಪತ್ರಕರ್ತರ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಪ್ರತಿಷ್ಠಿತ ಮಾಧ್ಯಮ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ‘ಕರ್ನಾಟಕ ಕಹಳೆ ಡಾಟ್ ಕಾಮ್’ ಮಾತನಾಡಿಸಿದಾಗ ಆನಂದದಿಂದ ಕಣ್ಣೀರಾದ ಲಕ್ಷ್ಮಣ ಅವರು, ಬಾಲ್ಯದಲ್ಲಿ ಜೀತ‌ಮಾಡುತ್ತಿದ್ದ‌ ನನಗೆ ಅಕ್ಷರದ ಮೂಲಕ ರಾಜ್ಯಮಟ್ಟದ‌ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿದೆ ಎಂದರೆ ನಂಬಲಾಗುತ್ತಿಲ್ಲ. ಮೂರು ದಶಕಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಸಂಕದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಪ್ರಶಸ್ತಿ, ಜವಾಬ್ದಾರಿಯನ್ನು ಹೆಚ್ಚಿಸಿದೆ. ಇನ್ನೂ ಉತ್ತಮವಾಗಿ ಕೆಲಸ‌ಮಾಡಲು ಸ್ಫೂರ್ತಿ ನೀಡಿದೆ ಎಂದರು.                     ಅಕ್ಷರ ವಂಚಿತ ಸಮುದಾಯದ, ಕಷ್ಟಗಳ ಸರಮಾಲೆಯಲ್ಲಿ ವಿದ್ಯೆ ಪಡೆದು ಇತರರಿಗೆ ಮಾದರಿಯಾದ ಕೆ.‌ಲಕ್ಷ್ಮಣ ಅವರಿಗೆ ಮತ್ತಷ್ಟು ಗೌರವಗಳು ಹುಡುಕಿಕೊಂಡು ಬರಲಿ ಎಂಬುದು ಕರ್ನಾಟಕ ಕಹಳೆ ಡಾಟ್ ಕಾಮ್ ನ ಹಾರೈಕೆ.

-ಸಿ. ಮಂಜುನಾಥ, ಸಂಪಾದಕರು: karnatakakahale.com, ಬಳ್ಳಾರಿ