ಅನುದಿನ ಕವನ-೧೮೫೮, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಬೆಸೆದ ತುಟಿಯಂಚು

ಬೆಸೆದ ತುಟಿಯಂಚು

ಒಳಗೆ ಕುದಿತ ಅಲ್ಲೆ ತಳಮಳ
ಚೆಲ್ಲದಂತೆ ಕುದಿ ಎಸರು ಉಕ್ಕಿ
ಕಣ್ಣಂಚಿನುದ್ದ ಮಂಜು ತುಂಬಿ
ಅರ್ಥವಾಗದ ನೋಟ ಹೊಮ್ಮಿದೆ

ಚುಕ್ಕಿಗಳ ಹೊದಿಕೆಯಲಿ ಹೊರಳಿ
ಇರುಳ ಗಳಿಗೆ ಭಾವಗಳರಳಿಸಿ
ಬೆರಳ ತುದಿಯಲಿ ಬರೆದ ಕವಿತೆ
ತಿಳಿವಿನ ಗೆರೆ ಮೀರಿ ಮಂಕಾಗಿದೆ

ಕಾರ್ಮೋಡದಡಿಯ ನವಿಲಂತೆ
ಎದೆ ತುಂಬಿದ ಕುಣಿದ ಮಾತು
ಮೆಲ್ಲಗೆ ತೆವಳಿ ನಿಲುಕದಂತೆ
ಬಲು ದೂರ ತೀರಕೆ ಸಾಗಿದೆ

ಮಂಜುಗಣ್ಣಂಚಿನ ಕವಿತೆ ಸಾಲಲಿ
ಅರಳಿದ ಭಾವಕೆ ರಾಗ ತುಂಬಿ
ಕುಣಿವ ಮಾತಿಗೆ ಲಯವ ಬಿಗಿಸಿ
ಒಪ್ಪಾಗಿ ಎದೆ ಸಂದಿಲಿ ಬಂಧಿಸಿ
ತುಟಿಯಂಚನು ಬೆಸೆದಿದೆ

-ಸರೋಜಿನಿ ಪಡಸಲಗಿ
ಬೆಂಗಳೂರು

Leave a Reply

Your email address will not be published. Required fields are marked *