
ಬಳ್ಳಾರಿ, ಅ.16: ಸಮಾಜ ಸುಧಾರಣೆಯಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದು ಎಂದು ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಗಂಗಾಧರ ಬಂಡಿಹಾಳ ಅವರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶುಕ್ರವಾರ ಆಯೋಜಿಸಿದ್ದ ‘ಸರಳಾ ಟೈಮ್ಸ್’ ವಿದ್ಯಾರ್ಥಿಗಳ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರಲ್ಲಿ ಜಾಗೃತಿ ಮೂಡಿಸುವ ಪತ್ರಿಕೆಗಳು ಸಮಸ್ಯೆಗಳಿಗೆ ಕನ್ನಡಿ ಹಿಡಿಯುವ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತವೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕೆಗಳ ಪ್ರಕಟಣೆ ನಿತ್ಯದ ಹೋರಾಟವಾಗಿದೆ. ಪತ್ರಿಕಾ ವರದಿಗಳು ನಿಖರತೆ ಮತ್ತು ಸತ್ಯಾಂಶಗಳನ್ನು ಒಳಗೊಂಡಿರುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದರು.
ಪತ್ರಕರ್ತರು ಯಾವುದೇ ಸುದ್ದಿಯನ್ನು ಪ್ರಕಟಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಸುಳ್ಳು ಮಾಹಿತಿ, ವದಂತಿಗಳು ಹಾಗೂ ತಪ್ಪು ಅರ್ಥೈಸುವಿಕೆಗೆ ಅವಕಾಶ ನೀಡಬಾರದು ಎಂದರು.
ನಿಷ್ಪಕ್ಷಪಾತವಾಗಿ, ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ ವರದಿ ಮಾಡುವುದು ಪತ್ರಕರ್ತರ ಜವಾಬ್ದಾರಿಯಾಗಿದೆ ಎಂದು ಹೇಳಿದ ಬಂಡಿಹಾಳ್ ಅವರು ದೂರದರ್ಶನ, ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದ ನಡುವೆಯೂ ಪತ್ರಿಕೆಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿವೆ ಎಂದು ಹೇಳಿದರು.
ತಂತ್ರಜ್ಞಾನದ ಬೆಳವಣಿಗೆಯಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ.
ಪ್ರಸ್ತುತ ಯುವಜನರು ದಿನಪತ್ರಿಕೆಗಳಿಂದ ವಿಮುಖರಾಗುತ್ತಿರುವುದು ಪತ್ರಿಕಾ ಕ್ಷೇತ್ರದ ಮುಂದಿರುವ ಪ್ರಮುಖ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ನಾಡು, ನುಡಿ ಮತ್ತು ಪತ್ರಿಕೋದ್ಯಮ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಈಶಾನ್ಯ ಟೈಮ್ಸ್ ಜಿಲ್ಲಾ ವರದಿಗಾರ ಸಿ. ಮಂಜುನಾಥ್ ಅವರು ನಾಡು ಮತ್ತು ನುಡಿ ಬೆಳವಣಿಗೆಯಲ್ಲಿ ಪತ್ರಿಕೋದ್ಯಮದ ಪಾತ್ರ ಅನನ್ಯವಾದುದು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಬೆಳವಣಿಗೆಯಲ್ಲಿ ಪತ್ರಿಕೆಗಳು ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು.
ಕನ್ನಡ ನಾಡು-ನುಡಿಯ ಅಭಿವೃದ್ಧಿಗೆ ಪ್ರಮುಖ ಪಾತ್ರ ವಹಿಸಿದ ಕನ್ನಡದ ಪತ್ರಿಕೆಯನ್ನು ಸ್ಮರಿಸಿಕೊಂಡ ಅವರು, ಕನ್ನಡ ಭಾಷೆಯ ಬೆಳವಣಿಗೆ ಮತ್ತು ಸಂರಕ್ಷಣೆಯಲ್ಲಿ ಪತ್ರಿಕೋದ್ಯಮದ ಮಹತ್ವವನ್ನು ವಿವರಿಸಿದರು. ಜೊತೆಗೆ, ಕನ್ನಡ ಭಾಷೆಯ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಪತ್ರಕರ್ತರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಪತ್ರಿಕೋದ್ಯಮವು ವೃತ್ತಿಪರ ಕೋರ್ಸ್ ಆಗಿರುವುದರಿಂದ ವಿದ್ಯಾರ್ಥಿಗಳು ಸುದ್ದಿ ಸಂಗ್ರಹಣೆ, ವರದಿ ಬರವಣಿಗೆ, ಸಂದರ್ಶನ, ಸಂಪಾದನೆ ಹಾಗೂ ಮಾಧ್ಯಮಗಳ ಕಾರ್ಯವೈಖರಿಯ ಕುರಿತು ಪ್ರಾಯೋಗಿಕ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಗತ್ಯವೆಂದು ಹೇಳಿದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ಡಿಜಿಟಲ್ ಮಾಧ್ಯಮ, ರೇಡಿಯೋ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೃತ್ತಿಪರ ಅವಕಾಶಗಳಿವೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಬಳಸಿಕೊಂಡು ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಮಂಜುನಾಥ್ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಪ್ರಹ್ಲಾದ ಚೌದ್ರಿ ಅವರು ಮಾತನಾಡಿ, ಮಾಡೆಲ್ ಕಾಲೇಜು ಯೋಜನೆಯಡಿ ಶೀಘ್ರ
ಕಾಲೇಜಿನಲ್ಲಿ ಮಲ್ಟಿ ಮೀಡಿಯಾ ಸ್ಟುಡಿಯೋವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಸಾಕಷ್ಟು ಅನುಕೂಲವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇದು ಉತ್ತಮ ಅಡಿಪಾಯವಾಗಲಿದೆ ಎಂದು ಹೇಳಿದರು.
ಇಂದು ಬಿಡುಗಡೆ ಮಾಡಿರುವ ‘ಸರಳಾ ಟೈಮ್ಸ್’ ವಿದ್ಯಾರ್ಥಿ ಪ್ರಾಯೋಗಿಕ ಪತ್ರಿಕೆಯು ಮುಂದಿನ ವರ್ಷದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ.ಹೊನ್ನೂರಾಲಿ ಐ. ಅವರು ಮಾತನಾಡಿ, ಒಂದು ಕಾಲದಲ್ಲಿ ಪತ್ರಿಕೆಗಳು ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಜನರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಹಾಗೂ ಸರ್ಕಾರದ ಯೋಜನೆಗಳು ಮತ್ತು ನೀತಿಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಆದರೆ ಪ್ರಸ್ತುತ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ. ತಂತ್ರಜ್ಞಾನದ ಬೆಳವಣಿಗೆ, ಡಿಜಿಟಲ್ ಮಾಧ್ಯಮಗಳ ಪ್ರಭಾವ ಮತ್ತು ಬದಲಾಗುತ್ತಿರುವ ಪತ್ರಿಕೋದ್ಯಮದ ಸ್ವರೂಪದ ಕುರಿತು ಚರ್ಚಿಸುವ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಬಸಪ್ಪ ಕೆ. ಅವರು ಮಾತನಾಡಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ವಿದ್ಯಾರ್ಥಿಗಳು ಲಭ್ಯವಿರುವ ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಜಯಕರ್ನಾಟಕ ಪತ್ರಿಕೆಯ ಉಪಸಂಪಾದಕರಾದ ರವೀಂದ್ರ ತಳಗಡೆ, ಕಾಲೇಜಿನ
ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸ ಕರಾದ ಡಾ.ಸತೀಶ್ ಇಟಗಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಸವರಾಜ್ ಅವರು ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗ ದ ಉಪನ್ಯಾಸಕಿ ಪದ್ಮಾವತಿ ಕೆ. ಅವರು ನಿರೂಪಿಸಿದರು. ಪತ್ರಿಕೋದ್ಯಮ ವಿದ್ಯಾರ್ಥಿಗಳಾದ ರಕ್ಷಿತಾ ಮತ್ತು ರೇಖಾ ಪ್ರಾರ್ಥನೆ ಗೀತೆ ಹಾಡಿದರು. ವಿದ್ಯಾರ್ಥಿ ವಿರೇಶ್ ವಂದಿಸಿದರು.
—–
