ಅನುದಿನ ಕವಿತೆ- ೧೧೮೮, ಕವಿ: ರವೀ ಹಂಪಿ, ಕವನದ ಶೀರ್ಷಿಕೆ: ನಾನೂ….

ನಾನೂ….

ಮಾತಾಡಲು
ಇಚ್ಚೆ ಇರದಿದ್ದರೂ
ಮೈತುಂಬ ಮಾತಾಗುತ್ತೇನೆ
ಬರೆಯುವ ಮನಸ್ಸಿದ್ದರೂ
ಪೆನ್ನಿನ ಕ್ಯಾಪನ್ನು ಬಿಚ್ಚುವುದಿಲ್ಲ
ಮಧ್ಯರಾತ್ರಿ ಬೈಕಿನ‌ ಕಿಕ್
ಒದೆಯುವ ಆಸೆಯಾಗುತ್ತದೆ

ಆದರೂ
ಕಾಲು ಮುರಿದವನ ಹಾಗೆ
ಕುಂಯ್ಗುಡುತ್ತ ಬಿದ್ದುಕೊಳ್ಳುತ್ತೇನೆ
ಯಾವಾಗೆಂದರೆ ಆವಾಗ
ಯಾರ ಮುಂದಾದರೂ
ಬಿಕ್ಕು ನುಗ್ಗಲು ಯತ್ನಿಸುತ್ತದೆ
ಮೊಬೈಲನ್ನು ಕೈಗೆತ್ತಿಕೊಳ್ಳುತ್ತೇನೆ

ಆಗಾಗ
ಎಲ್ಲರೆದುರು ತಮಾಷೆಯ ಮಾತಾಡಿ
ನಕ್ಕು ಮತ್ತಷ್ಟು ಭಾರವಾಗುತ್ತೇನೆ
ಹಸಿವಿರದಿದ್ದರೂ
ತೋರು ಬೆರಳಿನಿಂದ
ಈರ್ಷೆಯ ತುಂಡೊಂದನ್ನು
ಬಾಯಿಗೆ ತುರುಕುತ್ತೇನೆ

ಈ ನಡು ರಾತ್ರಿಯ ನಿಗೂಢತೆಯೇ ಹಾಗೆ
ಗಾಢ ನಿದ್ದೆಯಲ್ಲಿರುವಾಗ
ಸ್ವಂತ ಹೆಂಡತಿ ಮಕ್ಕಳೂ ದೂರ ಎನಿಸುತ್ತಾರೆ

ಏಕೆಂದರೆ
ನಾನೂ ಮನುಷ್ಯನೇ ಅಲ್ವಾ?


-ರವೀ ಹಂಪಿ

Leave a Reply

Your email address will not be published. Required fields are marked *