ಅನುದಿನ‌ ಕವನ-೧೬೦೭, ಹಿರಿಯ ಕವಯಿತ್ರಿ: ಸರೋಜಿನಿ‌ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಇಲ್ಲವೇನೊ ಹೆಸರು..!!

*ಇಲ್ಲವೇನೊ ಹೆಸರು ..!!

ಯಾಕೊ ಅದಕೊಂದು ಯೋಚನೆ
ಎಲ್ಲವೂ ಬಲು ವಿಚಿತ್ರ ಬಿಡು ಇಲ್ಲಿ
ಒಮ್ಮೆ ಇದ್ದಂತೆ ಇಲ್ಲ ಇನ್ನೊಂದು ಚಣ
ಒಂದರಂತಿಲ್ಲ ಇನ್ನೊಂದು ಮತ್ತೊಂದು
ನೂರು ಆಕಾರ ಏನಿದರ ಹೆಸರು

ನಗುವಿನ ಹೊನಲ ಬಗಲಲ್ಲೆ ಕಣ್ಣೀರಿನಲೆ
ಎದೆದುಂಬಿದ ಸಮಾಧಾನ ಸುಸ್ತು ಸೋತು
ಅಲ್ಲಿ ನೋಡಲೊ ಹೇಳಲೊ ಮೌನವೊ
ಸದ್ದಡಗಿ ಗವ್ವೆನ್ನೊ ಹೆದರಿಕೆ ನೋವಲ್ಲವೊ
ಗೊತ್ತೇ ಆಗದಲ್ಲ ಏನಿದರ ಹೆಸರು

ಮನದ ಮೊಗ ಬಾಗಿ ಕೈ ಮುಚ್ಚಿ ಬಿಡಿಸಿ
ನಡೆದಿತ್ತು ಲೆಕ್ಕಾಚಾರ ಕೂಡಿಸಿ ಕಳೆಯುತ
ಕೈ ಚೆಲ್ಲಿ ಝಾಡಿಸಿ ಗೋಣಲ್ಲಾಡಿ ಅಡ್ಡ ಉದ್ದ
ಉಸ್ಸೆಂದೊಮ್ಮೆ ಎದೆಯುಬ್ಬಿಸಿ ಮತ್ತೊಮ್ಮೆ
ಬುದ್ಧಿಗೂ ಗೊಂದಲ ಏನಿದರ ಹೆಸರು

ಕಳವಳದಿ ತಬ್ಬಿ ಬುದ್ಧಿ ಮನವ ನೋಡಿಲ್ಲಿ ಕೇಳು
ಹಾಗೇ ಅದು ದಿನವಡಗಿ ರಾತ್ರಿಯಾದಂತೆ
ಬಿಸಿಲು ಮಳೆಯಾಗಿ ಸುರಿದು ಹೆಪ್ಪುಗಟ್ಟಿದಂತೆ
ಏನಾದ್ರೂ ಬಿಮ್ಮನೆ ನಿಲ್ಲದೆ ಕಾಲ ಸಾಗಿದಂತೆ
ಅಷ್ಟೇ ಬಿಡದಕೆ ಇಲ್ಲವೇನೊ ಹೆಸರು!!


-ಸರೋಜಿನಿ ಪಡಸಲಗಿ
ಬೆಂಗಳೂರು

Leave a Reply

Your email address will not be published. Required fields are marked *