ಅನುದಿನ ಕವನ-೧೭೮೯, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಒಲವಿನ ಬಾಣದ ಮೊನೆಯು ಚುಚ್ಚುತಿದೆ ಹೇಗೆ ಹೇಳಲಿ ನಿನಗೆ
ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ

ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ ಸುರಿಸೆಂದು
ಹಿಂಬದಿಯ ನೆರಳೂ ಭೂತವಾಗಿ ಕಾಡುತಿದೆ ಹೇಗೆ ಹೇಳಲಿ ನಿನಗೆ

ಚೈತ್ರದ ಚಿಗುರು ಮಾಮರದ ಕೋಗಿಲೆಯ ದನಿ ಸುರಿವ ಬೆಳದಿಂಗಳು
ನಲುಮೆಯ ಭಾವನೆಯನೆಲ್ಲ ತಿವಿದು ಹೇಳುತಿದೆ ಹೇಗೆ ಹೇಳಲಿ ನಿನಗೆ

ಆಗಸದ ತೆಕ್ಕೆಗೊಗ್ಗದ ಚುಕ್ಕೆಯೊಂದು ಕಣ್ಣಾಚೆಗಿದ್ದರೂ ಕಣ್ಮಿಟುಕಿಸಿ
ಎದೆಯರಾಗ ಹಾಡುತ ತೇಲುತ ಪಿಸುಗುಡುತಿದೆ ಹೇಗೆ ಹೇಳಲಿ ನಿನಗೆ

ಬಾಂದಳದ ಆಚೆಗೆಲ್ಲ ಅಲೆ ಅಲೆಯಾಗಿ ತೇಲುತ ದೂರಕೆ ಸಾಗಿರುವ
ಸಿದ್ಧನ ಪ್ರೇಮದ ಹೊನಲು ಅನುರಣನಗೊಳುತಿದೆ ಹೇಗೆ ಹೇಳಲಿ ನಿನಗೆ


-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *