ಅನುದಿನ ಕವನ-೧೭೮೮, ಕವಯತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ನಾನು..ನೀನು

ನಾನು..ನೀನು

ಭಾವನೆಗಳಿಗೆಲ್ಲಾ ಬಣ್ಣದ ನೀರು
ಬೆರೆಸಿ ನಿನ್ನೆಡೆಗೆ ಹಾಗೇ
ನದಿಯಾಗಿ ಹರಿಯಬಲ್ಲೆ
ಸುಮ್ಮನೆ ನಾನು…

ಅದೇ ನದಿಯ ನಡುವೆ,
ಹರಿವ ನೀರಿನ ಪರಿವೆಯೇ ಇಲ್ಲದೆ
ದಡಕ್ಕೆ ಮುಖ ಮಾಡಿ ನಿಂತ
ಅಣೆಕಟ್ಟು ನೀನು ..

ಮಾತುಗಳ ಬಸಿದು,
ಎಲ್ಲಾ ತಲುಪಿಸಿ
ಬರಿದಾಗಿಬಿಡಬಲ್ಲೆ ನಾನು
ಮೌನದ ಚಿಪ್ಪಿನಲಿ, ಮಾತಿನ
ಹನಿಯ ಹರಳುಗಟ್ಟಿಸುವ ನೀನು…

ಇನ್ನಾಗದು ಎಂದು ,
ಮನಸ್ಸು ಎದ್ದು ಹೊರಟಾಗೆಲ್ಲಾ
ಎಲ್ಲಿಂದಲೋ ಅರಸಿ ಬರುವ
ನಿನ್ನ ಪಿಸುದ್ವನಿಯ ಸೆಲೆ….

ಒಮ್ಮೆ ಗಟ್ಟಿಸಿ,
ಕರೆಯಬಾರದೇ ಹೆಸರ,
ದೂರ ದಿಗಂತಕ್ಕೂ ದಕ್ಕಿಬಿಡಲಿ,
ಮುಗ್ದ ಪ್ರೀತಿಯ ನೆಲೆ……..


-ರೂಪ ಗುರುರಾಜ್, ಬೆಂಗಳೂರು

Leave a Reply

Your email address will not be published. Required fields are marked *