ಇಂದು ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿರುವ ಯುವ ಕವಿ ಹೊಸಪೇಟೆಯ ವಿಶಾಲ ಮ್ಯಾಸರ್ ಅವರ ‘ಬಿಸಿಲವ್ವನ ಹಾಡು’ ಕವಿತೆ ಪ್ರಕಟಿಸುವ ಮೂಲಕ karnatakakahale. com ಶುಭಾಶಯಗಳನ್ನು ಕೋರುತ್ತಿದೆ.
*****

🙏ಸಂತಸದ ವಿಷಯವೆಂದರೆ 01-01-2020 ರಂದು ಆರಂಭಿಸಿದ್ದ ಅನುದಿನ ಕವನ ಕಾಲಂ ಇಂದಿಗೆ(ಡಿ.31) ಐದು ವರ್ಷ ಪೂರೈಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಿರಂತರವಾಗಿ ಐದು ವರ್ಷಗಳ ಕಾಲ 1825 ಕವನಗಳು ಪ್ರಕಟಗೊಳ್ಳಲು ಕಾರಣರಾದ ಎಲ್ಲಾ ಹಿರಿಯ, ಯುವ ಕವಿಗಳಿಗೆ, ಕವಯತ್ರಿಯರಿಗೆ, ಪದ್ಯಗಳನ್ನು ಓದುವ ಮೂಲಕ ಪ್ರೋತ್ಸಾಹಿಸಿದ ಎಲ್ಲಾ ಕಾವ್ಯ ಪ್ರಿಯರಿಗೆ ಕರ್ನಾಟಕ ಕಹಳೆ ಡಾಟ್ ಕಾಮ್ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತದೆ🙏 ಮುಂದೆಯೂ ಎಲ್ಲರ ಸಹಕಾರ ಬೆಂಬಲವನ್ನು ನಿರೀಕ್ಷಿಸುತ್ತದೆ.
-ಸಿ. ಮಂಜುನಾಥ, ಸಂಪಾದಕರು —–
ಬಿಸಿಲವ್ವನ ಹಾಡು
ಮೊಬ್ಬು ಗಟ್ಟಿದ
ಈ ಸೂಜಿ ಮೊನೆಗೆ
ಮುತ್ತು ಕೊಟ್ಟು ಒಮ್ಮೆ
ಹೂವ ಅರಳಿಸು ಅವ್ವೆ
ಆ ಗವಿಯ ಜೇನಿಗೆ
ಜಡೆಯ ಚಂದ್ರಕ್ಕೆ
ಉಲ್ಕೆ ತಾರೆಗಳೆಲ್ಲ
ನಡುಗುಟ್ಟಿ ಹೋಗ್ಯಾವೆ
ಬಾರವ್ವ ಬಿಸಿಲವ್ವ
ತೊಡೆ ತೊಡೆಯ ಜೀವಕ್ಕೆ
ಮೀನು ಗಂಡದ ಜಾವಕ್ಕೆ
ಉಗುರುಗುರ ಆಗರಕೆ
ಹಸಿರ ಚಿಗುರಿಸ ಬಾರೆ
ಹಗಲು ಇರುಳಿನ ಹಿಮ್ಮಡಿ
ಬಿರುಕುಟ್ಟಿ
ಬೇರುಕತುಂಬೆಲ್ಲ ಜೇಕು
ಬಾಯ್ತೆರೆದ ಬೇರಿಗೆ
ತುಟಿಯ ಮರುಗುಟ್ಟಿ
ಬಾರವ್ವ ಬಿಸಿಲವ್ವ
ನಿಂತ ನೆಲದಾಗೆ
ನೆರಳ ಗುರುತಿಲ್ಲ
ಅಂಗೈ ಅಗಲಕ್ಕೆ
ಗೆರೆಯು ತಿಳಿದಿಲ್ಲ
ನಾಲಿಗೆಗೆ ರುಚಿಯಿಲ್ಲ ಅವ್ವೆ
ವರುಷ ವರುಷವೂ ಕಳೆದ
ಜೋಗುಳದ ಜೋಳಿಗೆ
ಲಾಲಿ ಮರೆತಾವೆ
ಉಡಿಯು ಹರಿದಾವೆ
ಬಾರವ್ವ ಬಿಸಿಲವ್ವ
ತಾರವ್ವ ಎಳೆ ಬಿಸಿಲ
ಇಳೆಯ ಬಿಸಿಲ
ನಿದ್ದಿಯ ಕಣ್ಣಿಗೆ
ಇದಿಯ ಕನಸೇ ಅವ್ವ
ಗಡಿಗೆಯ ತಟ್ಟವ್ವ
ಮಯ್ಯ ಮುರಿಯುವ
ತವಕ
ಬಾಕು ಬಾಕೆಲ್ಲ
ಬೆಂಕಿ ಮಳೆಯೇ
ಹಾಡವ್ವ ಬಿಸಿಲವ್ವ
ಬಾರವ್ವ ಬಿಸಿಲವ್ವ

-ವಿಶಾಲ್ ಮ್ಯಾಸರ್, ಹೊಸಪೇಟೆ
