ಬಳ್ಳಾರಿ, ಡಿ. 30:ಸತ್ಯ, ನಿಷ್ಠೆ ಹಾಗೂ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವ ಪತ್ರಿಕೆಗಳು ಜನತೆಯ ವಿಶ್ವಾಸವನ್ನು ಗಳಿಸುತ್ತವೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್. ಹೊಸಮನಿ ಅವರು ಅಭಿಪ್ರಾಯಪಟ್ಟರು. ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸುವರ್ಣ ವಾಹಿನಿ ದಿನಪತ್ರಿಕೆಯ ನಾಲ್ಕನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಸಮಾಜದ ಧ್ವನಿಯನ್ನು ಆಡಳಿತದ ಗಮನಕ್ಕೆ ತರುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದೆ ಎಂದು ಹೇಳಿದರು. ಕಡಿಮೆ ಅವಧಿಯಲ್ಲೇ ಸುವರ್ಣ ವಾಹಿನಿ ದಿನಪತ್ರಿಕೆ ತನ್ನದೇ ಆದ ಗುರುತನ್ನು ಪಡೆದುಕೊಂಡಿರುವುದು ಶ್ಲಾಘನೀಯವಾಗಿದ್ದು, ಸಂಪಾದಕರಾದ ವಾರ್ತ ರವಿ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭಾಶಯಗಳನ್ನು ತಿಳಿಸಿದರು.
ಈ ವೇಳೆ ಗಣ್ಯರು ಸುವರ್ಣ ವಾಹಿನಿ ದಿನಪತ್ರಿಕೆಯ ಸಾಮಾಜಿಕ ಜವಾಬ್ದಾರಿ ಹಾಗೂ ಪತ್ರಿಕೋದ್ಯಮಕ್ಕೆ ನೀಡುತ್ತಿರುವ ಕೊಡುಗೆಯನ್ನು ಕೊಂಡಾಡಿ ಶುಭಾಶಯಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಸುವರ್ಣ ವಾಹಿನಿ ದಿನಪತ್ರಿಕೆಯ ನೂತನ ವರ್ಷದ ಕ್ಯಾಲೆಂಡರ್ ಅನ್ನು ಗಣ್ಯರು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಧಿಕಾರಿ ಡಾ. ಯಲ್ಲ ರಮೇಶ್ ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಬಸರೆಡ್ಡಿ, ಸಂಪಾದಕರಾದ ವಾರ್ತಾ ರವಿ, ವಾರ್ತಾ ಇಲಾಖೆಯ ಗುರುರಾಜ್, ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ, ಸರಳಾದೇವಿ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಬಸಪ್ಪ ಸೇರಿದಂತೆ ಅನೇಕ ಗಣ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು.
—–
