ಅನುದಿನ ಕವನ-೧೮೭೮, ಹಿರಿಯ ಕವಿ:ಸಿದ್ಧರಾಮ‌ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್

ಎದೆಯ ಕಡಲೇ ಉರಿಯುತಿರುವಾಗ ಯಾರಿಗೆ ಹೇಳಲಿ
ಒಡಲ ಬೇಗೆ ಅಗ್ನಿಕುಂಡವಾಗಿರುವಾಗ ಯಾರಿಗೆ ಹೇಳಲಿ

ರೆಕ್ಕ ಕತ್ತರಿಸಿದ ಹಕ್ಕಿಯಂತೆ ಹಾರದೆ ಚಡಪಡಿಸುತಿರುವೆ
ನಿಂತ ನೆಲವೇ ಬಾಣಲೆಯಾಗಿರುವಾಗ ಯಾರಿಗೆ ಹೇಳಲಿ

ದಿಕ್ಕು ತಪ್ಪಿದ ಕಡು ಕತ್ತಲೆಯಲೊಂದು ಕುರುಡು ದಾರಿ
ಆಸರೆಯಾದ ಕೋಲೇ ಹಾವಾಗಿರುವಾಗ ಯಾರಿಗೆ ಹೇಳಲಿ

ಕಡು ಬಿಸಿಲಲಿ ಬೆಂದು ತಾಪದಿ ನಲುಗಿದೆ ಒಲವಿನ ಹೂ
ನೆಟ್ಟ ಕೈಗಳೇ ಕತ್ತರಿಯಂತಾಗಿರುವಾಗ ಯಾರಿಗೆ ಹೇಳಲಿ

ಕಡಲ ಮಂಥನವಾಗಿದೆ ಏನೂ ಅರಿಯದ ಸಿದ್ಧನ ಬಾಳು
ಅಂಗೈ ಸುಧೆ ಹಾಲಾಹಲವಾಗಿರುವಾಗ ಯಾರಿಗೆ ಹೇಳಲಿ


-ಸಿದ್ಧರಾಮ ಕೂಡ್ಲಿಗಿ

Leave a Reply

Your email address will not be published. Required fields are marked *