ಅನುದಿನ ಕವನ-೧೮೭೭, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ನನ್ನ
ಅಸಹಜ ಬದಲಾವಣೆಯನ್ನು
ಒರೆಗಚ್ಚಿ ನೋಡದೆ
ಸಂಪೂರ್ಣವಾಗಿ ತೊರೆದುಹೋದೆನೆಂಬ
ನಂಬಿಕೆಯನ್ನು ಇನ್ನಷ್ಟು ಬಲಪಡಿಸಿಕೊಂಡು
ಯಾತನೆಯ
ಇನ್ನೊಂದು ಮೆಟ್ಟಿಲು ಹತ್ತಿದ್ದಾಳೆ

ನಿರ್ಲಕ್ಷ್ಯದ ಪ್ರತಿಕ್ರಿಯೆಯಲ್ಲಿ
ಪ್ರೀತಿಯು ಕೆಲಸಕ್ಕೆ ಬಾರದಂತೆ
ವರ್ತಿಸುವುದನ್ನು
ತಾಳ್ಮೆಯ ಕಟ್ಟೆ ಮೇಲೆ ಕುಳಿತರೂ
ಪಕ್ಕದ ಅಸಹನೆಯ ಕೊಳದೊಳಗೆ
ಇನ್ನೊಂದು ಕಾಲು
ಇರಿಸಿಕೊಂಡಿರುವುದನ್ನು
ರೂಢಿಸಿಕೊಂಡಿದ್ದಾಳೆ.

ನನ್ನೊಳಗೆ ತಾನೇ
ಉರಿದು ಹೋಗಿ
ಉಳಿದ ಬೂದಿಯು ಲೀಲವಾಗಲು
ಗಾಳಿಯ ಬರುವಿಕೆಯಲ್ಲಿ
ಕಾಯ್ದಿರುವ ಸಮಯವನ್ನು
ಎಣಿಸುತ್ತಿರುವವನು ಎಂಬುದನ್ನು
ಮಾತ್ರ
ಮರೆತಿದ್ದಾಳೆ

-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

Leave a Reply

Your email address will not be published. Required fields are marked *