ಅನುದಿನ ಕವನ-೧೮೮೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಕವನದ ಶೀರ್ಷಿಕೆ:ಜೋಲಿಯ ಕಟ್ಟಿದಾಗ

ಜೋಲಿಯ ಕಟ್ಟಿದಾಗ

ಆಗೆಲ್ಲಾ
ನನ್ನ ಬಣ್ಣವಾಗಲಿ
ನನ್ನ ತೂಕವಾಗಲೀ
ನಿನ್ನೊಲವಿನಳತೆಗೆ
ಸಿಲುಕಿರಲಿಲ್ಲ

ಈಗೀಗ
ನಿನ್ನ ಕಣ್ಣುಗಳು
ನನ್ನ ಮುಖದ
ಕಲೆಗಳ ಎಣಿಸುತ್ತಿವೆ

ಅಷ್ಟೇ ಏಕೆ ನಿನ್ನ
ಮಾತಿಲ್ಲದ ಮೌನದಲ್ಲಿ
ಮುಗಿಲಷ್ಟು ತೂಕವಿದೆ

ನಿದ್ದೆಯಿಲ್ಲದ ರಾತ್ರಿಗಳು
ಜೋಗುಳ ಹಾಡಿ
ತೂಗಿದ ತೊಟ್ಟಿಲ
ನೆರಳೇ ಸಾಕ್ಷಿ
ನನ್ನ ಪಲ್ಲಟಕ್ಕೆ

ಹೌದು ಒಪ್ಪುತ್ತೇನೆ
ನಿನ್ನ ಕುಡಿಯ
ಹೊತ್ತು – ಕಾದು
ಹಿಗ್ಗಿದ ನನ್ನ ನಡುವೇ
ನಿನ್ನೊಲವಿಗೆ ಗೋಡೆ

ಹುಣ್ಣಿಮೆಯ ಚಂದ್ರನು
ತನ್ನೊಡಲ ಅಗಲಿಸಿದರೂ
ಹೊಮ್ಮುವ ಬೆಳಕಿನಲ್ಲಿ
ಅವನು ಹೊಳೆಯುತ್ತಾನೆ
ಜಗವ ಬೆಳಗುತ್ತಾನೆ

ಮಳೆ ತೊಳೆದು ಹರಿವ
ಇಳೆಯ ಮರಳಿನಂತೆ
ನನ್ನ ರೂಪ ಬದಲಾಗಿದೆ
ಹೊರತು ಅಂದು ನಿನಗೆ
ಒಲಿದ ನಾನು ಮತ್ತು
ನನ್ನೊಲವು ಕದಡದ
ನೀರಿನಂತೇ ಉಳಿದಿದೆ

ಹೌದು ! ಹೌದು !
ನಾನು ಹಿಗ್ಗಿದ್ದೇನೆ
ಈ ತೂಕ ಕೇವಲ
ಕೊಬ್ಬಿನದ್ದಲ್ಲ ..

ಹೆಣ್ಣಾಗಿ, ಅಮ್ಮನಾಗಿ…
ನಿನ್ನೊಲವಿಗೆ ಮುಡಿಪಾಗಿ
ನಾನು ಹಿಗ್ಗಿದ್ದೇನೆ ..

ಕಾದು ನೋಡು
ಒಂದು ದಿನ
ನಿನಗಿಂತಲೂ ನಾನು
ಸಪೂರಳಾಗಿ ಗರಿ ಬಚ್ಚಿ
ಮತ್ತೆ ಹಾರುತ್ತೇನೆ
ಬಂಧನವಿಲ್ಲದ ಮುಗಿಲಿನೆತ್ತರಕ್ಕೆ

-ಸಂಘಮಿತ್ರೆ ನಾಗರಘಟ್ಟ

Leave a Reply

Your email address will not be published. Required fields are marked *