ಅನುದಿನ ಕವನ-೧೮೮೯, ಕವಿ: ಎ ಎಂ‌ ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ:ಬಣ್ಣ ಬಣ್ಣಾದ ಲೋಕ

ಬಣ್ಣ ಬಣ್ಣಾದ ಲೋಕ

ಓ ಬಣ್ಣವೇ ನೀನಗದೆಷ್ಟು ಬಣ್ಣ
ಬಗೆದಷ್ಟೂ ಮೊಗೆದಷ್ಟೂ ವಿಭಿನ್ನ
ಹಚ್ಚಿದಷ್ಟೂ ಒರಸಿದಷ್ಟೂ ಅವಿಚ್ಛಿನ್ನ
ನಿನ್ನ ಮುಂದೆ ಎಲ್ಲವೂ ಶೂನ್ಯ ಶೂನ್ಯ

ಮಾತು ಮೌನದಲಿ ಮೌನ ಮಾತಿನಲಿ
ನಗೆ ಹೊಗೆಯಲಿ ಹೊಗೆಯ ನಗೆಯಲಿ
ಪ್ರೀತಿಯಾ ನೆಪದಲಿ ನೆಪದ ಪ್ರೀತಿಯಲಿ
ಬಣ್ಣವೇ ನಿನ್ನ ಹಚ್ಚಿ ತಿಕ್ಕಿದ್ದು ಮೋಸದಲಿ

ಕುರ್ಚಿಗೆ ಹಚ್ಚಿದಾ ಬಣ್ಣ ಮಾಸಿಹುದು
ಕುರ್ಚಿ ಹಿಡಿವರ ಬಣ್ಣ ಎಂದೂ ಮಾಸದು
ಮಾತಿನಾ ಸಿಡಿ ಗುಂಡಿಗೆ ಬಣ್ಣ ಬೆರಗಾಯ್ತು
ತನ್ನ ಬಣ್ಣಿಸುವರ ಬಣ್ಣಕೆ ಬಣ್ಣ ಬಯಲಾಯ್ತು

ವಿಧಾನ ಸೌಧವದು ಬಣ್ಣ ಬಣ್ಣದ ಲೋಕ
ಬಣ್ಣಕೇ ಬಣ್ಣ ಹಚ್ಚುವ ಮಾಯಾಲೋಕ
ಬಣ್ಣವೇ ವಿರಡ್ರೂಪ ಕಂಡ ಕಿನ್ನರ ಲೋಕ
ಬಣ್ಣದ ಬಡಿವಾರ ಬಣ್ಣಿಸಲಾಗದ ಶೋಕ

ಜೀವ ತಣ್ಣಗಾದ ಮೇಲೆ ಇನ್ಯಾವ ಬಣ್ಣ
ದೇಹ ದಹಿಸುವ ನಿಗಿ ನಿಗಿ ಕೆಂಡದ ಬಣ್ಣ
ತಣ್ಣಗಾಗುವ ಮುನ್ನ ಹಚ್ಚು ಬಸವ ಬಣ್ಣ
ಬಾಳ ಬೆಳಕಿನ ವಚನ ವಾಙ್ಮಯದ ಕಣ್ಣ


-ಎ.ಎಂ.ಪಿ ವೀರೇಶಸ್ವಾಮಿ, ಹೊಳಗುಂದಿ.

Leave a Reply

Your email address will not be published. Required fields are marked *