ಅನುದಿನ ಕವನ-೧೮೯೩, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು, ಕವನದ ಶೀರ್ಷಿಕೆ: ಹಂಗು ತೊರೆದ ಹುಡುಗಿ

ಹಂಗು ತೊರೆದ ಹುಡುಗಿ

ಅವಳು ಬದುಕಿನ ಎಲ್ಲ
ಗಳಿಗೆಗಳನ್ನು ನಿಧಾನಕ್ಕೆ
ಸವಿಯುತ್ತಲೇ ನಡೆದವಳು.

ಆಗಾಗ ಓದುತ್ತಾಳೆ,
ಮತ್ತೇನೋ ಗೀಚುತ್ತಾಳೆ,
ಹೊರಗೆ ನಿಂತು ನಾಯಿಗಳ
ಮಾತನಾಡಿಸುತ್ತಾಳೆ.
ನೆರೆಹೊರೆಯವರು ಕಂಡರೆ
ಬಾಗಿಲು ಹಾಕಿ
ಒಳಬರುತ್ತಾಳೆ.

ಒಂದು ರಾಶಿಯೆನಿಸುವಷ್ಟು
ಕಾಫಿ ಕುಡಿಯುತ್ತಾಳೆ.
ನಿನ್ನ ದೇಹದಲ್ಲಿ ರಕ್ತದ ಬದಲು
ಕಾಫಿಯೇ ಇರಬೇಕೇನೋ
ಎಂದು ಛೇಡಿಸಿದರೆ, ತುಸು
ಪೆಚ್ಚಾಗಿ ನೋಡುತ್ತಾಳೆ.

ತನ್ನದೆನ್ನುವ ಒಂದಿಷ್ಟು ಹೊರೆಯನ್ನು
ಹೊತ್ತು ನಡೆಯಲು ಒದ್ದಾಡುತ್ತಾಳೆ.
ಇಳಿಸಿ ನಡೆಯಲು ಮರೆಯುತ್ತಾಳೆ.

ಬದುಕಿನ ಎಲ್ಲ ಧಾವಂತ,
ಅಸಹನೆಗಳನ್ನು ಬದಿಗೊತ್ತಿ
ನೋವನ್ನೂ, ನಲಿವನ್ನೂ
ಅದಮ್ಯ ತಾಳ್ಮೆಯಿಂದ
ಅನುಭವಿಸುತ್ತಾ ನಿಲ್ಲುತ್ತಾಳೆ.

ಬದುಕು.. ಕಾಫಿಯ ಥರವೇ.
ಒಂದಷ್ಟು ಸಿಹಿಯಿದ್ದರೂ,
ಮೂಲರುಚಿ ಕಹಿಯೇ..
ಆಗಾಗ ಸಕ್ಕರೆ ಬೆರೆಸುವುದು
ರೂಢಿಯಾಗಬೇಕು.
ನಿಧಾನಕ್ಕೆ ಗುಟುಕರಿಸುವುದು
ಕೂಡ.

– ಸಮುದ್ಯತಾ ಕಂಜರ್ಪಣೆ, ಬೆಂಗಳೂರು

Leave a Reply

Your email address will not be published. Required fields are marked *