ಅನುದಿನ ಕವನ-೧೯೪೧, ಕವಿ: -ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ: ಅಗಲಿದ ಅಪ್ಪ

ಅಗಲಿದ ಅಪ್ಪ

ಅಪ್ಪ
ತನ್ನಪ್ಪನ ಮಾತೇ ಕೇಳದವ
ಅವ್ವಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ
ಇನ್ನಿಲ್ಲಿ ನನ್ನ ಪ್ರಶ್ನೆಯೇ ಬರುವುದಿಲ್ಲ

ಅಪ್ಪ
ಪ್ರಶ್ನೆಗಂತೂ
ಮುಖಾಮುಖಿಯಾಗ್ತಿರಲಿಲ್ಲ
ತನ್ನಿರುವಿಕೆಗೆ ಧಕ್ಕೆಯಾಗದಿರಲೆಂದು
ಪ್ರಶ್ನಿಸುವವನನ್ನೇ ಖಳನಾಯಕನನ್ನಾಗಿಸಿ
ಅವಿಭಕ್ತವನ್ನು ವಿಭಕ್ತ ಕುಟುಂಬವಾಗಿಸಿದ್ದ

ಅಪ್ಪ
ಉಸಿರಿರೊವರೆಗೂ
ಅಂದುಕೊಂಡಂತೆಯೇ ಬದುಕಿದ
ಯಾವ ಹೋರಾಟವನ್ನೂ ಮಾಡದೆ
ನೋವು ಅವಮಾನ ಅನುಭವಿಸಲಿಲ್ಲ
ಅಜ್ಜ ಗಳಿಸಿದ್ದನ್ನೇ ತಿಂದುಂಡು ಕಣ್ಮುಚ್ಚಿದ

ಅಪ್ಪ
ಅಗಲಿದನೆ?
ಅಪ್ಪನೇ ಅಗಲಿಸಿದ್ದ ಪ್ರಶ್ನೆಗೆ
ದಿನವಿಡೀ ಕಾಡುತ್ತಿದೆ ಯಕ್ಷಪ್ರಶ್ನೆಯಾಗಿ

ಅಪ್ಪ
ಕಾಡುವುದರಿಂದಲೇ
ಮಗ ಇನ್ಯಾರನ್ನು ಕಾಡದೇ
ಕಾಡು ಕಡಲು ಬಯಲ ಹಾಡರಸಿ
ಅಲೆಯುತ್ತಿದ್ದಾನೆ ಪ್ರೀತಿಯ ಉತ್ತರಕ್ಕಾಗಿ.


-ಕೆ.ಬಿ.ವೀರಲಿಂಗನಗೌಡ್ರ, ಬಾದಾಮಿ

Leave a Reply

Your email address will not be published. Required fields are marked *