
ಬೆಂಗಳೂರು, ಜು.21: ನಗರದ ಹೆಚ್.ಕೆ.ಬಿ.ಕೆ. ತಾಂತ್ರಿಕ ಮಹಾವಿದ್ಯಾಲಯ ಜು.೨೧ ರಿಂದ ೨೫ ರವರೆಗೆ ಆಯೋಜಿಸಿರುವ ಎಐಸಿಟಿಇ ಅನುಮೋದಿತ ಸಾರ್ವತ್ರಿಕ ಮಾನವೀಯ ಮೌಲ್ಯಗಳ ಕುರಿತ ಐದು ದಿನಗಳ ಮುಖಾಮುಖಿ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಮಂಗಳವಾರ ಆರಂಭವಾಯಿತು.
ನೋಡಲ್ ಕೇಂದ್ರವಾಗಿರುವ ಎಚ್.ಕೆ.ಬಿ.ಕೆ ತಾಂತ್ರಿಕ ಮಹಾವಿದ್ಯಾಲಯ ಮತ್ತು ಯುಹೆಚ್ ವಿ ಘಟಕಗಳ ಸಹಯೋಗದಲ್ಲಿ ಆಯೋಜನೆಯಾಗಿರುವ ಐದು ದಿನಗಳ ಸಾರ್ವತ್ರಿಕ ಮಾನವೀಯ ಮೌಲ್ಯಗಳು-೨ ಎಫ್.ಡಿ.ಪಿ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ಹೆಚ್.ಕೆ.ಬಿ.ಕೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮೊಹಮ್ಮದ್ ರಿಯಾಝ್ ಅಹ್ಮದ್ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವೀಯ ಮೌಲ್ಯಗಳ ಅಳವಡಿಕೆಯಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ವ್ಯಕ್ತಿ, ಸಮಾಜ, ಸಂಬಂಧಗಳ ಸರಿಯಾದ ನಿರ್ವಹಣೆಯಿಂದ ವ್ಯಕ್ತಿತ್ವ ನಿರ್ಧಾರವಾಗುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಂಡು ನಮ್ಮೊಂದಿಗೆ ನಾವು ನಡೆಯುವ ಪಯಣವೇ ಆನಂದದಾಯಕ. ಆಂತರಿಕ ಮತ್ತು ಬಾಹ್ಯ ಸಂಘರ್ಷಗಳ ಸಂಗಮ ಈ ಜೀವನ. ಜೀವನದಲ್ಲಿ ಧನಾತ್ಮಕ ಚಿಂತನೆಗಳು ಅತ್ಯವಶ್ಯ. ಶಿಕ್ಷಣದ ಸಾರ್ಥಕತೆಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಸಂವರ್ಧನೆಗೆ ಈ ಕಾರ್ಯಕ್ರಮ ಪೂರಕವಾಗಿದೆ. ಇದರ ಸದುಪಯೋಗಪಡಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಬೇಕು ಎಂದು ಅವರು ಅಧ್ಯಾಪಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದ ಸಂಯೋಜಕಿ ಹಾಗೂ ಐಐಸಿ ಡೀನ್ ಡಾ. ತಬ್ಸುಮ್ ಆರಾ ಮಾತನಾಡಿ, ಪ್ರಕೃತಿ ನಮಗೆ ಎಲ್ಲವನ್ನೂ ಕೊಟ್ಟಿದೆ. ಮನುಷ್ಯ ಜೀವನದಲ್ಲಿ ಏನನ್ನು ಮಾಡಬೇಕು ಎಂದು ಪ್ರಶ್ನೆ ಕೇಳಿಕೊಂಡರೆ ಮೌಲ್ಯಗಳ ಪ್ರಸ್ತುತತೆ ಅರ್ಥವಾಗುತ್ತದೆ. ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಮಾನವೀಯ ಮೌಲ್ಯಗಳ ಅಳವಡಿಕೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವನ್ನು ಕುರಿತು ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಐದು ದಿನಗಳ ಅಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಮೈಸೂರಿನ ಎಟಿಎಂಇ ಕಾಲೇಜಿನ ಸಂಶೋಧನ ಡೀನ್ ಡಾ. ಭಾಗ್ಯಶ್ರೀ ಎಸ್. ಆರ್. ಕಾರ್ಯಕ್ರಮದ ವೀಕ್ಷಕರಾಗಿ ಭಾಗವಹಿಸಿ ಮಾತನಾಡಿದರು.
ಆರ್.ವಿ.ಸಿ.ಇ ಸಂಸ್ಥೆಯ ಪ್ರಾಧ್ಯಾಪಕಿ ಡಾ. ವಿದ್ಯಾ ಪಾಟೀಲ ಸಹ ಸಮನ್ವಯಕರಾಗಿ ಉಪಸ್ಥಿತರಿದ್ದರು. ನಿವೃತ್ತ ಅಧಿಕಾರಿ ಡಾ. ಆರ್ ಶ್ರೀನಿವಾಸನ್ ವೇದಿಕೆ ಮೇಲಿದ್ದರು. ಕೇರಳದ ಕೊಚ್ಚಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎನ್. ಸುನೀಲ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಸಹ ಸಂಯೋಜಕಿ ಡಾ. ಝಾಹಿರಾ ತಬ್ಸುಮ್ ಸ್ವಾಗತಿಸಿದರು. ಇಓಸಿ ಘಟಕದ ಅಧ್ಯಕ್ಷೆ ಪ್ರೊ. ಕಲ್ಲಿಕುನ್ನೈಸಾ ವಂದಿಸಿದರು. ಪ್ರೊ. ನೂರ್ ಆಯೇಷಾ ನಿರೂಪಿಸಿದರು. ಶೈಕ್ಷಣಿಕ ವಿಭಾಗದ ಡೀನ್ ಡಾ. ಮಂಜುನಾಥ ಕೌಂಟೆ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
