ಕಾಸರಗೋಡು: ಇಲ್ಲಿನ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಕವಯತ್ರಿ ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ವ್ಯವಸ್ಥಿತ ಗ್ರಂಥಾಲಯ “ಶಿವದುರ್ಗಾ” ವನ್ನು ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ ಶ್ರೀ ಗಿರಿ ಸದನ ಚೂರಿಪ್ಪಳ್ಳ ನೆಲ್ಲಿಕಟ್ಟೆಯಲ್ಲಿ ಇತ್ತೀಚೆಗೆ ದಾಮೋದರ ಅವರು ಉದ್ಘಾಟಿಸಿದರು. ಮುಂದಿನ ದಿನಗಳಲ್ಲಿ ಒಂದು ಸುಸಜ್ಜಿತ ಗ್ರಂಥಾಲಯವಾಗಿ ಪರಿವರ್ತಿಸಲು ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ಡಾ. ವಾಣಿಶ್ರೀ ಕಾಸರಗೋಡು ಅವರು ಮಾತನಾಡಿ, ಗ್ರಂಥಾಲಯವು ಕನ್ನಡ, ಮಲಯಾಳಂ, ತುಳು, ಇಂಗ್ಲಿಷ್, ಹಿಂದಿ ಹೀಗೆ ವಿವಿಧ ಭಾಷೆಗಳ ಪುಸ್ತಕಗಳನ್ನು ಒಳಗೊಂಡಿರುವಂತೆ ಕಾರ್ಯಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು. ಗ್ರಂಥಾಲಯವು ಸಾರ್ವಜನಿಕರು, ಶಾಲಾ ವಿದ್ಯಾರ್ಥಿಗಳು, ಸಾಹಿತ್ಯ ಅಭಿಮಾನಿಗಳು, ಚಿಕಿತ್ಸೆಗೆಂದು ಬರುವ ರೋಗಿಗಳು, ಹಿರಿಯ ನಾಗರಿಕರು, ಬಳಸಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ವಿವರಿಸಿದರು.
ದೇಶ ಸುತ್ತು ಕೋಶ ಓದು ಎನ್ನುವ ನಾಣ್ನುಡಿಯಂತೆ ಒಂದು ಗ್ರಂಥಾಲಯವು ಊರಿನ ಜ್ಞಾನದ ಭಂಡಾರವಾಗುತ್ತದೆ. ಆ ಮೂಲಕ ಊರಿನ ಜನರನ್ನು ಸುಶಿಕ್ಷಿತರನ್ನಾಗಿ ಮಾಡಿ ಒಂದು ಸುಂದರ ಪ್ರಜ್ಞಾವಂತ ಸಮಾಜವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಉಡುಪಿ ಅವರು, ಮುಂದಿನ ದಿನಗಳಲ್ಲಿ ದಾನಿಗಳಿಂದ ಹಾಗೂ ಸಂಘ ಸಂಸ್ಥೆಗಳಿಂದ ಸರ್ಕಾರದಿಂದ ವಿವಿಧ ಸಾಹಿತ್ಯ ಕ್ಷೇತ್ರಗಳ ಪುಸ್ತಕಗಳನ್ನು ಸಂಗ್ರಹಿಸಿ ಉತ್ತಮ ಗ್ರಂಥಾಲಯವಾಗಿ ಹೊರ ಹೊಮ್ಮುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಈಗಾಗಲೇ ಗೋಕರ್ಣದ ಸಹೃದಯರೊಬ್ಬರು ನಮ್ಮ ಸಂಘದ ಕಾರ್ಯಕ್ಕೆ ಕೈ ಜೋಡಿಸಿದ್ದು ಹಲವಾರು ಪುಸ್ತಕಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಹೀಗೆ ಈ ಕಾರ್ಯದಲ್ಲಿ ತೊಡಗಿಕೊಳ್ಳಲು ದಾನಿಗಳು, ಸಾಹಿತಿಗಳು, ಪುಸ್ತಕ ಪ್ರಕಾಶಕರಿಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
