
ದಾವಣಗೆರೆ, ಜೂ.24: ಹಿಮೋಫಿಲಿಯಾ ಪೀಡಿತರ ಬಾಳಿಗೆ ಬೆಳಕಾದ ದಾವಣಗೆರೆಯ ಡಾ. ಸುರೇಶ್ ಹನಗವಾಡಿ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ‘ಪದ್ಮಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಕೇಂದ್ರದ ಸಚಿವರು, ಗಣ್ಯಾತಿ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಅಭಿನಂದನೆ: ಮೂಲತಃ ದಾವಣಗೆರೆ ಜಿಲ್ಲೆಯವರಾಗಿದ್ದರೂ ಬಳ್ಳಾರಿಯಲ್ಲಿ ಹಲವು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿರುವ ಡಾ. ಸುರೇಶ್ ಹನಗವಾಡಿ ಅವರ ಸಾಧನೆಗೆ ನಗರ ಸೇರಿದಂತೆ ಅಖಂಡ ಬಳ್ಳಾರಿ ಜಿಲ್ಲೆಯ ಜನತೆ ಸಂಭ್ರಮಿಸುತ್ತಿದ್ದಾರೆ. ಕನ್ನಡನಾಡಿಗೆ ಕೀರ್ತಿ ತಂದಿರುವ ಡಾ. ಸುರೇಶ ಹನಗವಾಡಿ ಅವರನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ, ಎಎಸ್ಎಂ ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಗೋವಿಂದರಾಜು ಮತ್ತಿತರರು ಅಭಿನಂದಿಸಿದ್ದಾರೆ.
