ಪ್ರೀತಿಸುವುದಾದರೆ…?
ಪ್ರೀತಿಸುವುದಾದರೆ?
ಪ್ರೀತಿಸು ಆ ಚಂದ್ರನಂತೆ
ಸುಮ್ಮನೆ ರಾತ್ರಿಯ ಕೊನೆಗಾಣಿಸದೆ
ಕತ್ತಲ ಸೌಂದರ್ಯವನು ಇಮ್ಮಡಿಸುವಂತೆ..
ಪ್ರೀತಿಸುವುದಾದರೆ?
ಪ್ರೀತಿಸು ಆ ಮಳೆಯಂತೆ!
ಬರೀ ತನುವನಷ್ಟೇ ನೆನೆಸುವುದಲ್ಲ
ಆತ್ಮಕ್ಕೆ ಅಂಟಿದ ಕಲ್ಮಶ ತೊಳೆಯುವಂತೆ
ಪ್ರೀತಿಸುವುದಾದರೆ?
ಪ್ರೀತಿಸು ಆ ತಂಗಾಳಿಯಂತೆ
ರಭಸದಿ ಬೀಸಿ ದಿಕ್ಕು ಬದಲಿಸದೆ
ಜೀವದ ಕಣಕಣವೂ ಮತ್ತೆ ಉಸಿರಾಡುವಂತೆ..
ಪ್ರೀತಿಸುವುದಾದರೆ?
ಪ್ರೀತಿಸು ಆ ಶರಧಿಯಂತೆ
ಹರಿದುಬಂದ ನದಿಯ ಮೂಲ ಕೇಳದೆ
ತನ್ನೊಳಗೆ ಒಂದಾಗಿಸಿ ನದಿಯೇ ಸಾಗರವಾಗುವಂತೆ…
ಪ್ರೀತಿಸುವುದಾದರೆ?
ಪ್ರೀತಿಸು ಬ್ರಹ್ಮಾಂಡದಂತೆ
ಕೆಲಗುಣಗಳನ್ನು ಮಾತ್ರ ಇಷ್ಟಪಡದೆ
ನಾನು ನಿನ್ನಲ್ಲಿ, ನೀನು ನನ್ನಲ್ಲಿ ಕರಗಿ ಹೋಗುವಂತೆ…

-ರೂಪ ಗುರುರಾಜ, ಬೆಂಗಳೂರು
——
