
ಬಳ್ಳಾರಿ: ಪತ್ರಕರ್ತರು ಸಮಾಜದ ಕಣ್ಣು, ಕಿವಿಗಳಾಗಿದ್ದು, ಸತ್ಯ, ನ್ಯಾಯ ಮತ್ತು ಪ್ರಾಮಾಣಿಕತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಹೊಣೆಗಾರಿಕೆ ಮಾಧ್ಯಮಗಳದ್ದಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವನಾಂದ ತಗಡೂರು ಅಭಿಪ್ರಾಯಪಟ್ಟರು.
ಅವರು ಸೋಮವಾರ ನಗರದ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ, ಕಾರ್ಯಕಾರಿ ಸಮಿತಿ ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟನೆ ಮಾಡಿ ಮಾತನಾಡಿದರು. ಇಂದಿನ ಡಿಜಿಟಲ್ ಯುಗದಲ್ಲಿ ಸುದ್ದಿ ವೇಗವಾಗಿ ಹರಡುವಂತಾಗಿರುವುದರಿಂದ, ಪತ್ರಕರ್ತರು ಇನ್ನಷ್ಟು ಜವಾಬ್ದಾರಿಯಿಂದ ವರದಿ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರು ಯಾವುದೇ ಒತ್ತಡಗಳಿಗೆ ಮಣಿಯದೇ, ಜನಪರ ಹಾಗೂ ನಿಷ್ಪಕ್ಷಪಾತ ಪತ್ರಿಕೋದ್ಯಮವನ್ನು ಮುಂದುವರಿಸಬೇಕು ಎಂದು ಕರೆ ನೀಡಿದ ಅವರು. “ಸಂಘಟನೆ ಬಲವಾಗಿದ್ದರೆ ಮಾತ್ರ ಪತ್ರಕರ್ತರ ಹಕ್ಕುಗಳು, ಭದ್ರತೆ ಮತ್ತು ಗೌರವವನ್ನು ಕಾಯ್ದುಕೊಳ್ಳಲು ಸಾಧ್ಯ. ನೂತನವಾಗಿ ಪದಗ್ರಹಣ ಮಾಡಿದ ಪದಾಧಿಕಾರಿಗಳು ಸಂಘಟನೆಯನ್ನು ಇನ್ನಷ್ಟು ಚುರುಕಾಗಿ ನಡೆಸಿ, ಜಿಲ್ಲೆಯ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕು” ಎಂದು ಸಲಹೆ ನೀಡಿದರು.
ಪತ್ರಕರ್ತರ ಕಲ್ಯಾಣ, ವಿಮೆ, ತರಬೇತಿ ಹಾಗೂ ವೃತ್ತಿಪರ ರಕ್ಷಣೆಗೆ ಸಂಘ ನಿರಂತರವಾಗಿ ಶ್ರಮಿಸಲಿದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರು ಮಾತನಾಡಿ, ನೀವೆಲ್ಲ ನಿಷ್ಪಕ್ಷಪಾತವಾಗಿ ವರದಿ ಮಾಡಿ, ಧೈರ್ಯವಾಗಿ ಮಾತನಾಡುವ ವ್ಯಕ್ತಿತ್ವ ನಿಮ್ಮದಾಗಲಿ, ವೃತ್ತಿಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಿಕೊಳ್ಳಿ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ.ಮಾತನಾಡಿ, ಪ್ರಾಮಾಣಿಕತೆಯಿಂದ ಜನರಿಗೆ ಉತ್ತಮ ಕೆಲಸ ಮಾಡುವ ಉದ್ದೇಶವಿಟ್ಟುಕೊಂಡು ಕಾರ್ಯ ನಿರ್ವಹಿಸಲು ಮನವಿ ಮಾಡಿದರು.
ಎಸ್ಪಿ ಡಾ.ಶೋಭಾರಾಣಿ ಅವರು ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಮೂಲಕ ನಿಜವಾದ ಸುದ್ದಿ ಯಾವುದು ಎಂಬಂತಾಗಿದೆ. ಅದಕ್ಕಾಗಿ ಸತ್ಯಾಸತ್ಯತೆಯ ಸುದ್ದಿಕೊಡುವ ಮಾಧ್ಯಮಗಳು ಮುಖ್ಯ ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಖಡ್ಗಕ್ಕಿಂತ ಹರಿತವಾದ ಪೆನ್ನನ್ನು ಹೊಂದಿರುವ ಪತ್ರಕರ್ತರು ಸಮಾಜದ ಕೆಟ್ಟ ಸಂಸ್ಕೃತಿಯನ್ನು ಹೋಗಲಾಡಿಸುವ ಕೆಲಸ ಮಾಡಬೇಕು ಎಂದರು.

ಮೇಯರ್ ಪಿ. ಗಾದೆಪ್ಪ ಮಾತನಾಡಿ, ನಗರದ ದುರ್ಗಮ್ಮ ದೇವಸ್ಥಾನದ ಅಭಿವೃದ್ದಿ ವಿಷಯದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದ ಅವರು, ಪಾಲಿಕೆಯಲ್ಲಿ ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸ್ಥಾಪಿಸಿ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಈ ಬಾರಿಯ ಬಜೆಟ್ ನಲ್ಲಿ ಮಾಡಲಿದೆಂದು ಭರವಶೆ ನೀಡಿದರು.
ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಎನ್.ವೀರಭದ್ರಗೌಡ, ಮಾತನಾಡಿ ಪತ್ರಿಕಾ ಭವನದ ಅಭಿವೃದ್ಧಿ, ಪತ್ರಕರ್ತರ ಕ್ಷೇಮಾಭಿವೃದ್ದಿ ನಿಧಿ ಸ್ಥಾಪನೆ ಮೊದಲಾದ ಕಾರ್ಯಗಳ ಮೂಲಕ ಸಂಘವು ಕ್ರಿಯಾತ್ಮಕವಾಗಿ ನಡೆಯಲಿದೆ. ಇಂದು ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ತಲಾ ಎರೆಡು ಲಕ್ಷ ರೂಗಳನ್ನು ನೀಡಿದ ಶಾಸಕರೂ, ಮಾಜಿ ಸಚಿವರಾದ ಬಿ.ನಾಗೇಂದ್ರ, ನಗರ ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಧನ್ಯವಾದ ಸಲ್ಲಿಸಿದರು.

ಈ ವೇಳೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧ್ಯಮ ಕ್ಷೇತ್ರದ ಕೆ.ಎನ್. ಗಂಗಾಧರ, ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಎಸ್.ನಾಗರಾಜ್, ಸಿದ್ದು ಪೂಜಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತು ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಪ್ರತಿಜ್ಞಾ ವಿಧಿ ಭೋದಿಸಿದರು.
ಸಮಾರಂಭದಲ್ಲಿ ಶಾಸಕರಾದ ಬಿ.ನಾಗೇಂದ್ರ, ನಾರಾ ಭರತ್ ರೆಡ್ಡಿ, ಡಿಸಿಸಿ ಅಧ್ಯಕ್ಷ ಅಲ್ಲಂ ಪ್ರಶಾಂತ್, ಪಾಲಿಕೆಯ ಪ್ರತಿಪಕ್ಷದ ನಾಯಕ ಶ್ರೀನಿವಾಶ್ ಮೋತ್ಕರ್, ಜಿಪಂ ಸಿಈಓ ಮಹಮ್ಮದ್ ಹಾರೀಶ್ ಸುಮೇರ, ಸಂಘದ ರಾಜ್ಯ ಸಮಿತಿ ಸದಸ್ಯ, ಹೆಚ್.ಬಸವರಾಜ್, ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ ಮೊದಲಾದವರು ಇದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಕುಲಕರ್ಣಿ ಸ್ವಾಗತ, ಕಾರ್ಯಕಾರಿ ಸದಸ್ಯ ಕೆ.ಎಂ.ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ದೇಸಾಯಿ ವಂದನಾರ್ಪಣೆ, ಶೃತಿ ಹಂದ್ಯಾಳ್ ಪ್ರಾರ್ಥನೆ ಸಲ್ಲಿಸಿದರು.
—–
